Home

Imageರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ ಎಂಬ ಕಪ್ಪು ಕನ್ನಡಕದ ಕರುಣಾನಿಧಿಯ ಮಾತುಗಳನ್ನು ಜನ ಸುಲಭವಾಗಿ ಮರೆಯಲಾರರು. ಈಗ ಆ ಮಾತುಗಳನ್ನೇ ನೆನಪಿನಲ್ಲಿಟ್ಟುಕೊಂಡು ರಾಮಾಯಣದ ಕೆಲವು ಘಟನೆಗಳನ್ನು ಅವಲೋಕಿಸಬೇಕು.
ಲಂಕೆಯಲ್ಲಿ ರಾವಣನನ್ನು ಕೊಂದು ಆತನ ಪುಷ್ಪಕ ವಿಮಾನದಿಂದ ರಾಮ ಸೀತೆಯನ್ನು ಕರೆದುಕೊಂಡು ಬರುತ್ತಿದ್ದಾನೆ. ಹೀಗೆ ಆಕಾಶಮಾರ್ಗದಲ್ಲಿ ಬರುತ್ತಿದಾಗ ರಾಮ ತಮ್ಮ ವನವಾಸದಲ್ಲಿ ಕಳೆದ  ಪ್ರದೇಶಗಳು, ವೈಚಿತ್ರ್ಯಗಳು, ಗಗನಗೋಚರಿ ವಸುಂಧರೆಯ ಸೌಂಧರ್ಯಗಳೆಲ್ಲವನ್ನೂ ವಿವರಿಸುತ್ತಾ ಬರುತ್ತಾನೆ. ಹಾಗೆ ಭಾರತ- ಶ್ರೀಲಂಕಾ ನಡುವಿನ ಸಾಗರದ ನಡುವಿನ ಸೇತುವೆಯನ್ನು ಸೀತೆಗೆ ತೋರಿಸುತ್ತಾ ” ನಿನಗಾಗಿ ನಾನು ಕಟ್ಟಿಸಿದ ಆ ಸೇತುವೆಯನ್ನು ನೋಡು. ಅದು ಆ ಮಹಾಸಾಗರದ ನೆತ್ತಿಯ ಬೈತಲೆಯಂತೆ ಶೋಭಿಸುವುದನ್ನು ನೋಡು” ಹೇಳುತ್ತಾನೆ. ರಾಮಾಯಣದ ಯುದ್ಧಕಾಂಡದಲ್ಲಿ, ಕಾಳಿದಾಸನ ರಘುವಂಶ ಕಾವ್ಯದಲ್ಲಿ , ತುಲಸೀದಾಸರ ರಾಮಚರಿತಮಾನಸದಲ್ಲಿ, ಅಧ್ಯಾತ್ಮ ರಾಮಾಯಣದಲ್ಲಿ  ಕೂಡಾ ಹೀಗೆ ಗಗನಗೋಚರಿ ವಸುಂಧರೆಯ ವಿವರಣೆಗಳಿವೆ. ಇವೆಲ್ಲವೂ ಕವಿಕಲ್ಪನೆಗಳು ಎಂದು ಒಂದೇ ಏಟಿಗೆ ಇಡೀ ರಾಮಾಯಣವನ್ನು ಮುಗಿಸಿಬಿಡಬಹುದು. ಆದರೆ ರಾಮಸೇತುವಿನ ಬಗ್ಗೆ, ಆಕಾಶಮಾರ್ಗದಲ್ಲಿ ರಾಮನ ವಿವರಣೆಗಳ ಜಾಡು ಹಿಡಿದು ಹೊರಟರೆ ಆಶ್ಚರ್ಯವಾಗದೇ ಇರದು. ಭಾರತದಿಂದ ಶ್ರೀಲಂಕಾಕ್ಕೆ ವಿಮಾನ ಪ್ರಯಾಣ ಮಾಡಿದವರು ಮತ್ತು ಗೂಗಲ್ ಅರ್ಥ್‌ನಿಂದ ರಾಮಸೇತುವನ್ನು ನೋಡಿದವರಿಗೆ ರಾಮಾಯಣದ ಹೋಲಿಕೆಗಳು ಸುಲಭವಾಗಿ ಅರ್ಥ್‌ವಾಗುತ್ತವೆ. ಏಕೆಂದರೆ ಭೂಮಿಯ ಸಾಕಷ್ಟು ಎತ್ತರದಿಂದ ನೋಡಿದರೆ ರಾಮಸೇತು ಇಂದಿಗೂ “ಮಹಾಸಾಗರದ ನೆತ್ತಿಯ ಬೈತಲೆ” ಯಂತೆಯೇ ಕಾಣುತ್ತದೆ. ಹಾಗೆ ಕಾಣಲು ನಮಗೆ ವಿಮಾನಯಾನ ಮತ್ತು ಗೂಗಲ್ ಅರ್ಥ್‌ಗಳು ಸಾಕಾಗುತ್ತವೆ. ಆದರೆ ತ್ರೇತಾಯುಗದಲ್ಲಿ?
ಅಂಥದ್ದೇ ಇನ್ನಷ್ಟು ಉಲ್ಲೇಖಗಳು ರಾಮಾಯಣದಲ್ಲಿ ಸಿಗುತ್ತವೆ. ರಾಮಸೇತುವನ್ನು ದಾಟಿ ಮುಂದುವರಿದು ರಾಮನು ಪಂಚವಟಿಯಲ್ಲಿ ತಾವು ಕಟ್ಟಿಕೊಂಡು ವಾಸವಾಗಿದ್ದ ಪರ್ಣಕುಟಿರವನ್ನು  ಆಕಾಶ ಮಾರ್ಗದಿಂದ ತೋರಿಸುತ್ತಾ “ನಮ್ಮ ಪರ್ಣಶಾಲೆಯು ಚಿತ್ರದಂತೆ ಕಾಣುತ್ತಿದೆ” ಎಂದೂ ಮುಂದೆ ಕಾಡಿನ ನಡುವೆ ಹರಿಯುತ್ತಿರುವ ಯಮುನಾ ನದಿಯನ್ನು ತೋರಿಸುತ್ತಾ “ದೂರದಲ್ಲಿ ಗೆರೆಯಂತೆ ಕಾಣುತ್ತಿರುವುದು ಯಮುನೆ” ಎಂದೂ ಹೇಳುತ್ತಾನೆ. ಹಾಗೇ ಮುಂದುವರಿಯುತ್ತಾ ಭಾರದ್ವಾಜ ಋಷಿಗಳ ಆಶ್ರಮದ ಮೇಲಿಂದ ಕಾಣುವ ಗಂಗಾನದಿಯನ್ನೂ , ದೂರದಲ್ಲಿ ಕಾಣುವ ಅಯೋಧ್ಯಾ ನಗರವನ್ನೂ ತೋರಿಸುತ್ತಾನೆ. ವಾಸ್ತವವೆಂದರೆ ಇಂದು ಪ್ರಯಾಗದಲ್ಲಿರುವ ಭಾರದ್ವಾಜ ಕ್ಷೇತ್ರ ಅಯೋಧ್ಯೆಗೆ ೧೫೦ ಕಿ.ಮೀ ದೂರದಲ್ಲಿದೆ. ವಿಮಾನದಲ್ಲಲ್ಲದೆ ಇನ್ನೆಲ್ಲಿಂದಲೂ ೧೫೦ ಕಿ.ಮೀ ದೂರದ ಅಯೋಧ್ಯೆಯನ್ನು ಪ್ರಯಾಗದಿಂದ ಕಾಣಲು ಸಾಧ್ಯವಾಗುವುದಿಲ್ಲ. ಅಲ್ಲದೆ ರಾಮನು ಅಯೋಧ್ಯೆಗೆ ತೆರಳುವ ಮುನ್ನ ಭಾರದ್ವಾಜ ಮಹರ್ಷಿಗಳ ಆಶ್ರಮದಲ್ಲಿ ಒಂದು ದಿನ ತಂಗಿರುತ್ತಾನೆ. ಅಂದು ವಿಮಾನ ಇಳಿಯುವ ಮುನ್ನ  ರಾಮನು ಸೀತೆಗೆ ಮರುದಿನ ತೆರಳಲಿರುವ , ಹದಿನಾಲ್ಕು ವರ್ಷ ದೂರವಿದ್ದ ಅಯೋಧ್ಯೆಯನ್ನು ದೂರದಿಂದಲೇ ತೋರಿಸಿರುತ್ತಾನೆ. ಆಧುನಿಕ, ವೈಜ್ನಾನಿಕ ಎಂದು ಕರೆದುಕೊಳ್ಳುವ ಇಂದು ಇವು ಅಚ್ಚರಿಯ ವಿವರಣೆಗಳಾಗಿ ಕಾಣುತ್ತವೆ. ಅವುಗಳನ್ನು ತರ್ಕಬದ್ದವಾಗಿಯೇ ಶೋಧಿಸಿದರೆ ಇನ್ನೂ ಒಂದು ವಿಚಿತ್ರ ಗೋಚರಿಸುತ್ತದೆ. ಏಕೆಂದರೆ  ರಾವಣನನ್ನು ಕೊಂದ ನಂತರ ರಾಮನು ವಿಮಾನದಿಂದ ಅಯೋಧ್ಯೆಗೆ ಬಂದ ಮಾರ್ಗವೂ ಆಧುನಿಕ ವೈಮಾನಿಕ ಶಾಸ್ತ್ರಜ್ನರ ಬೆರಗಿಗೆ ಕಾರಣವಾಗಿದೆ. ಅಂದರೆ ಲಂಕಾನಗರಿ( ಕೊಲಂಬೋ ಸಮೀಪ)-ರಾಮಸೇತು(ಚೆನ್ನೈಗೆ ಸಮೀಪ)-ಕಿಷ್ಕಿಂಧೆ(ಬೆಂಗಳೂರು, ಬಳ್ಳಾರಿ, ಮಾರ್ಗವಾಗಿ ಹಾದು)-ಪಂಚವಟಿ(ಮುಂಬೈಯನ್ನು ಹಾದು)-ಭಾರದ್ವಾಜಾಶ್ರಮ(ಲಖ್ನೋ ಸಮೀಪ)-ಅಯೋಧ್ಯೆ(ಆಗ್ರಾ, ದೆಹಲಿಗೆ ಸಮೀಪ)ಮಾರ್ಗದಲ್ಲೇ ಪುಷ್ಪಕ ವಿಮಾನ ಹಾದುಹೋಗುತ್ತದೆ. ಅಲ್ಲದೆ ಪುಷ್ಪಕ ವಿಮಾನವೆಂಬುದು ಕಟ್ಟುಕಥೆ, ವಾಲ್ಮೀಕಿಯದು ಕಾವ್ಯ ಚಮತ್ಕಾರ ಎಂದು ತಿಳಿದುಕೊಂಡರೂ ಕೂಡಾ ಅಲ್ಲಿ ತರ್ಕಗಳು ಬಿದ್ದುಹೋಗುತ್ತವೆ. ಏಕೆಂದರೆ ರಾಮಾಯಣದಲ್ಲಿ ಉಲ್ಲೇಖಿತ ಸಾಲುಗಳನ್ನು ನೆಲದಲ್ಲಿ ನಿಂತೋ, ಪರ್ವತದ ಮೇಲೆ ನಿಂತೋ ವರ್ಣಿಸಲು ಸಾಧ್ಯವೇ ಇಲ್ಲ. ಇಂದು ಪ್ರಯಾಗದಲ್ಲಿದ್ದವನಿಗೆ ಮರುದಿನ ಅಯೋಧ್ಯೆಯನ್ನು ಭೂಮಾರ್ಗದ ಮೂಲಕ ತಲುಪಲು ಅಂದು ಖಂಡಿತಾ ಸಾಧ್ಯವಿರಲಿಲ್ಲ. ಒಂದು ವೇಳೆ ಸಾಧ್ಯವಿತ್ತು ಎಂದಿಟ್ಟುಕೊಂಡರೂ ೧೫೦ ಕಿ.ಮೀ ದೂರದಿಂದ ಅಯೋಧ್ಯೆ ನಗರ ಗೋಚರಿಸುವುದಂತೂ ಅಸಂಭವ. ಹಾಗಾದರೆ ರಾಮಾಯಣದಲ್ಲಿ ಉಲ್ಲೇಖಿತ ಪುಷ್ಪಕ ವಿಮಾನಕ್ಕೆ ವೈಜ್ನಾನಿಕ ಆಧಾರಗಳು ಇಲ್ಲವೇ? ಅಲ್ಲಿ ಉಲ್ಲೇಖಿತ ಪುಷ್ಪಕ ವಿಮಾನದ ವರ್ಣನೆಗಳು ಆಧುನಿಕ, ನಾಗರಿಕ ವೈಮಾನಿಕ ಶಾಸ್ತ್ರಕ್ಕೆ ಪೂರಕ ಎನಿಸುವುದಿಲ್ಲವೇ?
ರಾಮಾಯಣದ ಸುಂದರ ಕಾಂಡದ ೮ನೇ ಅಧ್ಯಾಯದಲ್ಲಿ ” ಹನುಮಂತನು ಲಂಕೆಯಲಿ ರಾವಣದ ವಿಮಾನವನ್ನು ಕಂಡಾಗ ಅದು ನೆಲದ ಮೇಲೆ ನಿಂತಿರದೆ ಗಾಳಿಯಲ್ಲಿ  ತೇಲಾಡುತ್ತಾ ನಿಂತಿತ್ತು” ಎಂದೂ ಉತ್ತರ ಕಾಂಡದ ೧೬ನೇ ಅಧ್ಯಾಯದಲ್ಲಿ ” ಪುಷ್ಪಕ ವಿಮಾನವು ಅತಿ ಸೆಕೆಯಾಗಲೀ, ಅತೀ ಚಳಿಯಾಗಲೀ ಇಲ್ಲದೆ ಸಮಶೀತೋಷ್ಣವಾಗಿತ್ತು” ಎಂಬ ವಿವರಣೆಗಳಿವೆ. ರಾಮಾಯಣ ಕಾಲದಲ್ಲೇ ಅಂಥ ವಿಜ್ನಾನ, ಗುರುತ್ವಾಕರ್ಷಣೆಯನ್ನು ಮೀರುವ ತಂತ್ರಜ್ನಾನ, ಸೌರಶಕ್ತಿ ಬಳಕೆ ವೊದಲಾದವುಗಳ ಪರಿಕಲ್ಪನೆ ಅಶ್ಚರ್ಯವೆನಿಸುತ್ತವೆ. ಹಿಂದೂ ಪುರಾಣ ಎಂಬ ಒಂದೇ ಒಂದು ಕಾರಣಕ್ಕೆ ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸಲೂಬಹುದು. ಆದರೆ ರಾಮಾಯಣದಲ್ಲೇ ಉಲ್ಲೇಖಿತ , ಸಾಕ್ಷಿಸಹಿತವಾದ ಚಿತ್ರಣಗಳು ಇಂದೂ ಇವೆಯಲ್ಲಾ , ಅಂದಿನ ತಂತ್ರಜ್ನಾನವೆಲ್ಲವೂ ಇಂದಿನ ವಿಜ್ನಾನಿಗಳ ಕನಸ್ಸೂ ಅಗಿವೆಯಲ್ಲಾ ಎಂಬ ಪ್ರಶ್ನೆಯನ್ನು ಕುತೂಹಲಿಗಳೆಲ್ಲರೂ ಮಾಡಿಕೊಳ್ಳುತ್ತಾರೆ. ಕುತೂಹಲಗಳೇ ಹುಟ್ಟದ ಜೀವಿಗಳು ಮಾತ್ರ ರಾಮನ ಎಂಜಿಯರಿಂಗ್ ಕಾಲೇಜನ್ನು ಹುಡುತ್ತಾರೆ. ಅವರೆಲ್ಲರಿಗೂ ಜ್ನಾನ, ವಿಜ್ನಾನಗಳನ್ನು ಎಂಜಿನಿಯರಿಂಗ್ ಕಾಲೇಜುಗಳಿಗೆ ಹೊರತಾಗಿ ಯೋಚಿಸಲಾರರು.
 Imageಪ್ರಕೃತಿಯೇ ಒಂದು ವಿಚಿತ್ರ. ನಿಂತ ನೆಲದಲ್ಲಿಯೇ ಅದನ್ನು ವರ್ಣಿಸಲಾಗದು. ಪ್ರಕೃತಿಯ ಕೆಲವು ವರ್ಣನೆಗಳಿಗೆ ಆಕಾಶದೆತ್ತರಕ್ಕೆ ಪ್ರಯಾಣಿಸಬೇಕು. ಇದು ಪ್ರತಿಯೊಬ್ಬ  ವಿಮಾನ ಯಾತ್ರಿಕನ ಅನುಭವ. ದೆಹಲಿಯಿಂದ ಬೆಂಗಳೂರಿಗೆ ವಿಮಾನಯಾನ ಮಾಡಿದವನು ಕೊಂಚವಾದರೂ ಪ್ರಕೃತಿಯ ವಿಚಿತ್ರಗಳನ್ನು ನೋಡಿರುತ್ತಾನೆ. ನೂಲಿನಂತೆ, ಬಲೆಯಂತೆ ಹರಡಿರುವ ನದಿಗಳು ಮತ್ತು ಅವುಗಳ ಪಾತ್ರಗಳು, ಜಾಡುಗಳು, ಮುಖಜ ಭೂಮಿಗಳು, ಮಣ್ಣಿನ ದಿಬ್ಬಗಳನ್ನು ಪೇರಿಸಿಟ್ಟಂತೆ ಕಾಣುವ ದಕ್ಖನ್ ಪ್ರಸ್ಥಭೂಮಿ, ದೂರದಲ್ಲಿ ಗೋಚರಿಸುವ  ಹಸಿರಿನ ಮುದ್ದೆಯಂಥಾ ಪಶ್ಚಿಮ ಘಟ್ಟಗಳು, ಮುಂಬೈ-ಮಂಗಳೂರು ವಿಮಾನ ಮಾರ್ಗದಲ್ಲಿ ಬುಟ್ಟಿಗಳಂತೆ, ತಡೆಗೋಡೆಗಳಂತೆ, ಭ್ರಹತ್ ಮರದ ಸಾಲುಗಳಂತೆ ಕಾಣುವ ಪ.ಘಟ್ಟದ  ಶ್ರೇಣಿಗಳು, ಸಮುದ್ರವನ್ನು ಮುನ್ನುಗ್ಗದಂತೆ ತಡೆಯಲೆಂದೇ ಇರುವ ಕರಾವಳಿ ವಿಸ್ಮಯವನ್ನು ಹುಟ್ಟಿಸುತ್ತವೆ. ಏಕೆಂದರೆ ಇದೇ ಕರಾವಳಿಯನ್ನು ಪುರಾಣದಿಂದಲೂ ಪರಶುರಾಮನ ಸೃಷ್ಟಿ ಎಂದೂ, ಆತ ಕೊಡಲಿಯನ್ನು ಬೀಸಿ ಭಾಗವನ್ನು ನಿರ್ಮಿಸಿದ ಎಂಬ ಕಥೆಗಳಿವೆ. ಹಾಗಾದರೆ ಆ ಕಥೆಗೂ ವಿಮಾನದಲ್ಲಿ ಕಾಣುವ ತಡೆಗೋಡೆಯಂಥ ದೃಶ್ಯಕ್ಕೂ ನೇರಾನೇರಾ ಸಂಬಂಧವಿದೆಯೇನು?
ಇನ್ನೂ ಒಂದು ವಿಚಿತ್ರವೆಂದರೆ ಇಂಥ ಹಲವು ಭಾಗಗಳನ್ನು ಆಕಾಶದಿಂದ ನೋಡಿದಾಗ ಅವುಗಳು ಕಾಣುವ ಆಕಾರದಲ್ಲೇ ಅವುಗಳ ಹೆಸರಿರುವುದು. ಆ ಹೆಸರುಗಳೇನೂ  ರಾಜೀವ್ ಗಾಂಧಿಯದ್ದೋ, ನೆಹರೂ ಕಾಲದ್ದೋ ಹೆಸರುಗಳಲ್ಲ. ಪುರಾತನ ಸಾಹಿತ್ಯಗಳಲ್ಲೇ ಅವುಗಳ ಉಲ್ಲೇಖಗಳಿವೆ. ಹಾಗಾದರೆ ಆ ಪುರಾತನರು ಆ ಪ್ರದೇಶಗಳನ್ನು ಆಕಾಶದಿಂದ ನೋಡಿದ್ದಾರೆಯೇ ಎಂಬ ಪ್ರಶ್ನೆಯೊಂದು ಕುತೂಹಲಿಗಳಿಗೆ, ನೆಲದಭಿಮಾನ ಉಳ್ಳವರಿಗೆ ಹುಟ್ಟುತ್ತವೆ.
ಹೀಗೆ ಹಲವು ನಿದರ್ಶನಗಳನ್ನಿಟ್ಟುಕೊಂಡು, ಕುತೂಹಲವನ್ನು ಬೆಳೆಸಿಕೊಂಡು , ಅಚ್ಚರಿಯ ಕಣ್ಣುಗಳಿಂದ ಭೂಮಿಯನ್ನು ನೋಡಲು ತೊಡಗಿದವರು ಪ್ರಸಿದ್ಧ ವಾಸ್ತಶಾಸ್ತ್ರಜ್ನ ಅಹೋರಾತ್ರ ನಟೇಶ್ ಪೋಲೆಪಲ್ಲಿಯವರು . ಬಹುಬೇಡಿಕೆಯ ವಾಸ್ತುಶಾಸ್ತ್ರಜ್ನ ನಟೇಶ್ ಪೋಲೆಪಲ್ಲಿಯವರು ನಿರಂತರ ಅಧ್ಯಯನಶೀಲರು. ಒಮ್ಮೆ ನಟೇಶ್ ಅವರು ಅಧ್ಯಯನಾರ್ಥ ವಿಶ್ವದ ವಿವಿಧ ಭಾಗಗಳನ್ನು ಗೂಗಲ್ ಅರ್ಥ್ ಮೂಲಕ ಕ್ಷಿಸುತ್ತಿದ್ದಾಗ ಒಂದರ ನಂತರ ಮತ್ತೊಂದು ಎಂಬಂತೆ ವಿಚಿತ್ರಗಳು ಪ್ರಕಟವಾಗತೊಡಗಿದವು. ತಾವು ಒಂದನೇ ಕ್ಲಾಸಿನಲ್ಲಿದ್ದಾಗ ಅಮ್ಮನಿಗೆ ” ಎಲ್ಲೆಲ್ಲೂ ಬೆಟ್ಟಗುಡ್ಡಗಳೇ ಇರುವಾಗ ವೆಂಕಟರಮಣ ಸ್ವಾಮಿ ತಿರುಪತಿ ಬೆಟ್ಟದಲ್ಲೇ ಏಕೆ ಇದ್ದಾನೆ” ಎಂಬ ಪ್ರಶ್ನೆಯೊಂದನ್ನು ಕೇಳುತ್ತಾರೆ. ಆಗ ಅವರಮ್ಮ ” ತಿರುಪತಿ ಸಾಮಾನ್ಯ ಬೆಟ್ಟವಲ್ಲ.ಅದು ಶ್ರೀಹರಿಯ ಹಾಸುಗೆ ಆಶೇಷನ ಪ್ರತಿರೂಪ. ಅದರ ತಲೆಯೇ ತಿರುಪತಿ, ಹೊಟ್ಟೆಯೇ ಕಡಪಾ, ಸೊಂಟವೇ ಶ್ರೀಶೈಲ” ಎಂದು ಹೇಳುತ್ತಾರೆ. ಇದನ್ನೆಲ್ಲಾ ಇದನ್ನು ನಿನಗಾರು ಹೇಳಿದರು ಎಂದು ಬಾಲಕ ಪ್ರಶ್ನಿಸಿದಾಗ ಅಮ್ಮ “ತಾತ ಹೇಳಿದರು” ಎಂದು ಉತ್ತರಿಸುತ್ತಾರೆ. ಮುಂದೆ ಇದೇ  ಕೂತೂಹಲವನ್ನು ಬೆಳೆಸಿಕೊಂಡ ನಟೇಶ್ ಗೂಗಲ್ ಅರ್ಥ್ ಅನ್ನು ನೋಡಿದಾಗ ನಿಜಕ್ಕೂ ತಿರುಪತಿ ಆಶೇಷನ ಪ್ರತಿರೂಪವೇ! ಹೀಗೆ ಇತರ ಭಾಗಗಳನ್ನು ಗೂಗಲ್ ಅರ್ಥ್ ಮೂಲಕ ನೋಡುತ್ತಾ ಬಂದಾಗ ಎಲ್ಲವೂ ಹೆಸರಿಗೆ ತಕ್ಕಂಥ ಭಾಗಗಳೇ. ಮೇಲಾಗಿ ಆ ಭಾಗಗಳನ್ನು ಆಕಾಶದಿಂದ ನೋಡಿದರೆ ಮಾತ್ರ ಅವು ಹಾಗೆ ಕಾಣುತ್ತವೆ. ಹಾಗಾದರೆ ನಮ್ಮ ಪೂರ್ವಿಜರು ಭೂಮಿಯ ಹೆಸರುಗಳನ್ನು ಆಕಾಶದಿಂದ ಭೂಮಿಯನ್ನು ನೋಡಿ ಇಟ್ಟರೇ? ಇದು ನಟೇಶ್ ಪೋಲೆಪಲ್ಲಿಯವರ ಪ್ರಶ್ನೆ. ಹೀಗೆ ತಮಗೆ ಕಂಡದ್ದು, ಹೊಳೆದದ್ದು, ಅನಿಸಿದ್ದನ್ನು  ಹೇರಿಕೆಯಾಗದಂತೆ ಮಂಡಿಸಿದ ಪುಸ್ತಕ ” ಗಗನ ಗೋಚರೀ ವಸುಂಧರಾ”. ಅದನ್ನು ಮಿತ್ರಸಂಹಿತೆಯಂತೆ ಆಪ್ತ ವಾಕ್ಯಗಳಲ್ಲಿ ಕಟ್ಟಿಕೊಟ್ಟವರು ಡಾ. ಶ್ರೀವತ್ಸ ವಟಿಯವರು.  ಈ ಪುಸ್ತಕವನ್ನು ಓದುತ್ತಿದ್ದರೆ ನೆಲದ ಮೇಲಿನ ಪ್ರೀತಿಯು ಮತ್ತಷ್ಟು ಹೆಚ್ಚಾಗುವುದು, ನಮ್ಮ ನಮ್ಮ ಊರುಗಳನ್ನೂ ಒಮ್ಮೆ ಆಕಾಶದಿಂದ ನೋಡಬೇಕು ಎನಿಸುವುದು.
ಪುಸ್ತಕದ ಕೆಲವು ನಿದರ್ಶನಗಳನ್ನು ನೋಡುತ್ತಿದ್ದರೆ ನಾವು ಮಹಾನ್ ಪರಂಪರೆಯೊಂದರ ಪೀಳಿಗೆಯವರು ಎಂಬ ಹೆಮ್ಮೆ ಉದಿಸುತ್ತವೆ.

 •     ಪುರಾಣ ಪ್ರಸಿದ್ಧ ಕೈಲಾಸ ಪರ್ವತ ಹಿಂದುಗಳ ಪಾಲಿನ ಪರಮ ಪವಿತ್ರ ತೀರ್ಥಕ್ಷೇತ್ರ. ಬ್ರಹ್ಮನ ಹೃದಯದಿಂದ ಹುಟ್ಟಿದ ಕಾರಣಕ್ಕೆ ಇದು ಮಾನಸ ಸರೋವರ ಎಂದು ಹೆಸರಾಯಿತು ಎಂಬ ಉಲ್ಲೇಖಗಳಿವೆ. ಅಲ್ಲದೆ ಮಾನಸ ಎಂಬುದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಹೃದಯ ಎಂಬ ಅರ್ಥವೂ ಇದೆ. ಆಶ್ಚರ್ಯವೆಂದರೆ ಉಪಗ್ರಹ ಚಿತ್ರ ಗೂಗಲ್ ಅರ್ಥ್‌ನಿಂದ ಮಾನಸ ಸರೋವರವನ್ನು ನೋಡಿದರೆ ಅದು ಅಪ್ಪಟ ಹೃದಯದಾಕಾರದಲ್ಲೇ ಇದೆ. ಬ್ರಹ್ಮನ ಹೃದಯ, ಮಾನಸ ಎಂಬ ಹೆಸರುಗಳಿಗೆ ಅನ್ವರ್ಥವಾಗುವಂಥ ಚಿತ್ರ. ಇದರರ್ಥವೇನು? ನಮ್ಮ ಪುರಾತನ ಕಾಲದಲ್ಲಿ ಯಾವ ಗೂಗಲ್ ಅರ್ಥ್ ಇತ್ತು? ಈ ಮಾನಸ ಸರೋವರದ ಪಕ್ಕದಲ್ಲೇ ರಾಕ್ಷಸ ಸರೋವರ ಎಂಬ ಮತ್ತೊಂದು ಸರೋವರವೂ ಇದೆ. ಆ ಸರೋವರದ ಚಿತ್ರ ಕೂಡಾ ಡೊಳ್ಳೂಹೊಟ್ಟೆಯ ರಾಕ್ಷಸನಂತೆಯೇ ಇದೆ.
 • ‘    ಶ್ರೀಲಂಕಾದಿಂದ ಸುಮಾರು ೬೫೦ ಕಿ.ಮೀ ದೂರದ ಮಾಲ್ಡೀವ್ಸ್ ಅನ್ನು ಭಾರತೀಯರು “ಮಾಲಾ” ದ್ವೀಪ ಎಂದೇ ಕರೆದರು. ಈ ದ್ವೀಪರಾಷ್ಟ್ರವನ್ನು ಆಕಾಶದಿಂದ ನೋಡಿದರೆ ಮಣಿ ಮಾಲೆಯಂತೆ, ತುದಿಯಲ್ಲೊಂದು ಪೆಂಡೆಂಟ್ ನೇತುಹಾಕಿದಂತೆ ಕಾಣುವುದು. ಯಾವುದೇ ಭಾಗದಿಂದ, ಸಮುದ್ರ ಭಾಗದಿಂದ ನೋಡಿದರೂ ಈ “ಮಾಲೆ” ಗೋಚರಿಸುವುದಿಲ್ಲ. ಆದರೆ ಶತಶತಮಾನಗಳ ಹಿಂದೆಯೇ ಅದಕ್ಕೆ ಭಾರತೀಯರು ಮಾಲಾದ್ವೀಪ ಎಂದು ಹೇಗೆ ಹೆಸರಿಟ್ಟರು.
 • ‘    ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಶದಲ್ಲಿ ಖ್ಯಾತ ನಾಗ ಕ್ಷೇತ್ರ. ಅದರ ಪಕ್ಕದಲ್ಲೇ ಕುಮಾರ ಪರ್ವತವೆಂಬ ಬೆಟ್ಟವಿದೆ. ಈ ಕ್ಷೇತ್ರದ ಬಗ್ಗೆ ಹಲವು ಕಥೆಗಳಿವೆ. ಗೂಗಲ್ ಅರ್ಥ್‌ನಿಂದ ನೋಡಿದರೆ ಕುಕ್ಕೆ ಕ್ಷೇತ್ರವು ಒಂದು ಕೋನದಿಂದ ಸರ್ಪವೊಂದು ತನ್ನ ೫ ಹೆಡೆಗಳನ್ನು ಅರಳಿಸಿದ ವಿನ್ಯಾಸದಂತೆ ತೋರುತ್ತದೆ. ಇನ್ನೂ ಎತ್ತರದಿಂದ ನೋಡಿದರೆ ಈ ಪರ್ವತದ ಆಕಾರವು ಅನೇಕ ಹೆಡೆಗಳನ್ನು ಅರಳಿಸಿ ಮಲಗಿದ ಸರ್ಪವನ್ನು ಹೋಲುತ್ತದೆ. ಭೂಗೋಳ ಶಾಸ್ತ್ರಕ್ಕೂ ಅಧ್ಯಾತ್ಮಕ್ಕೂ ಇದೆಂಥಾ ನಂಟು?
 • ‘    ಗುಜರಾತಿನ ಜುನಾಗಢ ಪ್ರದೇಶ ಹಾಗೂ ಅಲ್ಲಿನ ಗಿರ್‌ನಾರ್ ಶ್ರೇಣಿಗಳು ಮಹಾಭಾರತದಲ್ಲಿ ಕೃಷ್ಣನ ಲೀಲೆಗಳಿಗೆ ಸಾಕ್ಷಿಯಾದವುಗಳು. ಅಂಥ ಪ್ರದೇಶದ ಒಂದು ಊರು “ಮಯೂರ್‌ಪಂಖ್” (ನವಿಲುಗರಿ). ಕೃಷ್ಣನಿಗೂ ನವಿಲುಗರಿಗೂ ಅವಿನಾಭಾವ ನಂಟು. ಆದರೆ ಆಧುನಿಕ ಉಪಗ್ರಹ ಚಿತ್ರವೂ ಈ ನಂಟನ್ನು ಹೇಳದೇ ಇರುವುದಿಲ್ಲ. ಏಕೆಂದರೆ ಮಯೂರ್‌ಪಂಖ್‌ನ “ವಿನ್ಯಾಸ ಕೂಡಾ ಅಪ್ಪಟ ನವಿಲುಗರಿಯಾಕಾರದಲ್ಲೇ ಇದೆ. ಯಾರು ಈ ಚಿತ್ರಗಳನ್ನು ನೋಡಿದ್ದರು? ಯಾರು ಆ ಊರಿಗೆ ಹಾಗೆ ಹೆಸರಿಟ್ಟರು?

ಇಂಥ ನೂರಾರು ಉದಾಹರಣೆಗಳನ್ನು ನಟೇಶ್ ಪೋಲೆಪಲ್ಲಿಯವರು “ಗಗನ ಗೋಚರೀ ವಸುಂಧರಾ” ಪುಸ್ತಕದಲ್ಲಿ ಸಚಿತ್ರಸಮೇತ ವಿವರಿಸಿದ್ದಾರೆ. ಆಧಾರಬದ್ದ ಸಾಕ್ಷ್ಯಗಳಿದ್ದಾಗ್ಯೂ ಎಲ್ಲೂ ಇದೇ ಸರಿ ಎಂಬ ವಾದವಿಲ್ಲ. ನಂಬಲೇಬೇಕು ಎಂಬ ಹಠವಿಲ್ಲ. ಆದರೆ ಪುಸ್ತಕವನ್ನು ಓದಿದ ಮೇಲೆ ನಂಬದೇ ಇರಲು ಸಾಧ್ಯವಾಗುವುದೇ ಇಲ್ಲ. ಭೂಮಿಯನ್ನು ನೋಡುವ ದೃಷ್ಟಿ ಬದಲಾಗದೇ ಇರುವುದಿಲ್ಲ. ಇಂಥ ಜ್ನಾನಗಳು ಏಕೆ ಕಾಲಗರ್ಭಕ್ಕೆ ಸೇರಿಹೋಯಿತು ಎಂಬುದಕ್ಕೂ ಪೋಲೆಪಲ್ಲಿಯವರು ಕಾರಣಗಳನ್ನು ನೀಡುತ್ತಾರೆ.”ಗಗನ ಗೋಚರೀ ವಸುಂಧರಾ”ವನ್ನು ಓದುತ್ತಿದ್ದರೆ ಪದೇ ಪದೇ ಬಾಹ್ಯಾಕಾಶಯಾನ ಮಾಡುವ ಸುನಿತಾ ವಿಲಿಯಮ್ಸ್ ಯಾನಕ್ಕೆ ಕೊಂಡೊಯ್ಯುವ ಭಗವದ್ ಗೀತೆ ನೆನಪಾಗುತ್ತದೆ.  ಗಗನದಿಂದ ಗೋಚರಿಸುವ ವಸುಂಧರೆ, ಆ ಭಗವದ್ ಗೀತೆಯ ” ಸಕಲ ಚರಾಚರಗಳಿಗೆ ಅಧ್ಯಕ್ಷನೂ ನಾನೇ” ಎಂಬ ಶ್ಲೋಕ ಬಾಹ್ಯಾಕಾಶದಿಂದ ಕೊಡುವ ಅರ್ಥವನ್ನು ನೆನೆದೇ ರೋಮಾಂಚನವಾಗುತ್ತದೆ. Image

Advertisements

13 thoughts on “ಗಗನಗೋಚರೀ ವಸುಂಧರಾ: ಪುರಾತನರೂ ವಿಮಾನ ಏರಿದ್ದರಾ?

 1. ರಾಮಾಯಣದಲ್ಲಿ ಬರುವ ಭೌಗೋಳಿಕ ವಿವರಣೆಗಳನ್ನು ಒಬ್ಬ ಕವಿ ತನ್ನ ಕಲ್ಪನಾಸಾಮರ್ಥ್ಯ ಮಾತ್ರದಿಂದ ಬಣ್ಣಿಸಲು ಸಾಧ್ಯವೇ ಇಲ್ಲ.. ಈ ಬಗ್ಗೆ ನಾನು ಅನೇಕ ಬಾರಿ ಅಲೊಚಿಸಿದ್ದೆ. ಈ ಪುಸ್ತಕ ಯಾವ ಭಾಷೆಯಲ್ಲಿದೆ ಮತ್ತು ಎಲ್ಲಿ ದೊರೆಯಬಹುದು ತಿಳಿಸುತ್ತೀರ?

  • This book is available in Bangalore Rastrothana Parishad Near Keshava Krupa Chamrajpet. Its Written in Kannada by Natesha Polepalli Cost is 300rs

 2. Kalidasana Meghadhoothadallii ide reethiya bahala varnanegalu ive.. Dr. Bhave anno Samshodhakaru 1999 ralle idara mele samshodhane madiddaru ..

 3. ಪುಸ್ತಕವನ್ನು ಓದಿದ ಮೇಲೆ ನಂಬದೇ ಇರಲು ಸಾಧ್ಯವಾಗುವುದೇ ಇಲ್ಲ. ಭೂಮಿಯನ್ನು ನೋಡುವ ದೃಷ್ಟಿ ಬದಲಾಗದೇ ಇರುವುದಿಲ್ಲ….

  Superb lines….

 4. ಅದ್ಭುತ, ಸೂಕ್ತ ಮತ್ತು ಶ್ರೇಷ್ಟ ಲೇಖನ. ಅ೦ದಹಾಗೆ ಪರ್ಣಶಾಲೆಯಿರುವುದು ನನಗೆ ತಿಳಿದ ಮಟ್ಟಿಗೆ ಆ೦ಧ್ರದ ಖಮ್ಮಮ್ ಜಿಲ್ಲೆಯ ಭದ್ರಾಚಲ೦ನ ಹತ್ತಿರ. ಅಲ್ಲಿ ರಾಮಾಯಣದ ಎಲ್ಲ ಕುರುಹುಗಳನ್ನು ಇ೦ದೂ ನೋಡಬಹುದು. ಆಗ ಚಿತ್ರಕೂಟದಿ೦ದ ಸೇತುಬ೦ಧ ಮತ್ತು ರಾಮೇಶ್ವರಕ್ಕೆ ಪರ್ಣಶಾಲೆಯಿ೦ದ ಹಾದುಹೋಗುವ ನಕ್ಷೆ ಒ೦ದು ಸರಳರೇಖೆಯ೦ತೆ ತೋರುತ್ತದೆ.

 5. ‘ಗಗನಗೋಚರೀ ವಸುಂಧರಾ’ ಪುಸ್ತಕದ ಬಗ್ಗೆ ‘ಚಂದನ’ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕ ತಿಳಿಯಿತು. ಈ ಲೇಖನ ಇನ್ನೂ ಕುತೂಹಲ ಮೂಡಿಸಿದೆ. ಖಂಡಿತಾ ಒದಲೇಬೇಕೊಮ್ಮೆ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s