ಪ್ರತೀ ದೀಪಾವಳಿಯಲ್ಲೂ ಕಾಡುವ ಆ ಹಣತೆ

ಮಂಗಳೂರು ಬಸ್ ಸ್ಟ್ಯಾಂಡಿನಲ್ಲಿ ಬಸ್ಸು ಹತ್ತುವಾಗಲೂ ಅಳುಕಿತ್ತು. ಅಲ್ಲಿಗೆ ಹೋಗಬೇಕೇ? ಹೋಗಬಹುದೇ? ಎಂದೇ ಅನಿಸುತ್ತಿತ್ತು. ಬಸ್ಸು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಹತ್ತಿಯೂ ಆಯಿತು. ಉಡುಪಿಯಲ್ಲಿ ಇಳಿದುಬಿಡಲೇ ಎನ್ನುತ್ತಿದ್ದಂತೆ ಉಡುಪಿಯೂ ಹೊರಟುಹೋಯಿತು. ಹೊನ್ನಾವರ ಅಥವಾ ಭಟ್ಕಳದಲ್ಲಿ ಇಳಿದುಬಿಡೋಣ ಎನ್ನುತ್ತಿದ್ದಂತೆ, ಯೋಚನೆಗಳು ಓಡುತ್ತಿದ್ದಂತೆ ಅವೂ ದಾಟಿ ಆಗಿತ್ತು. ಬಸ್ಸು ಕುಮುಟಾ ಮುಟ್ಟಿತ್ತು. ಇನ್ನು ಒಂದು ಗಂಟೆಯಲ್ಲಿ ಶಿರಸಿಗೆ ಬಸ್ಸು ಬರುತ್ತದೆ ಎಂದರು. ಕಾದು ಶಿರಸಿ ಬಸ್ ಹತ್ತಿಯಾಯಿತು. ಜಾಗ ಚೆನ್ನಾಗಿದೆ ನೋಡಿದ ಹಾಗಾಗುತ್ತದೆ ಎಂಬ ಆಸೆಯೂ ಹುಟ್ಟಿತು.
ಅದು ಮುಟ್ಟಿದರೂ ಮುಟ್ಟದ ನಿಧಾನಗತಿಯ ರಸ್ತೆ. ಎಲ್ಲಿಂದ ಎಲ್ಲಿಗೋ ಬಂದ ಭಾವ. ಕೊನೆಗೂ ಬಸ್ಸು ಶಿರಸಿ ಸ್ಟಾಂಡಿಗೆ ಮುಟ್ಟುವ ಮೊದಲೇ ಸಿದ್ಧಾಪುರಕ್ಕೆ ಹೋಗುವವರು ಇಳಿಯಿರಿ ಎಂದು ಕಂಡಕ್ಟರ್ ಕೂಗಿದ. ಸಿದ್ದಾಪುರದ ಬಸೊಂದು ರಸ್ತೆಯಲ್ಲಿ ಕಾಯುತ್ತಿತ್ತು. ಸಿದ್ಧಾಪುರಕ್ಕೆ ಅಲ್ಲಿಂದ ಮೂವತ್ತೈದು ನಲವತ್ತು ಕಿ.ಮೀಗಳ ದಾರಿ. ಇಡೀ ದಾರಿ ಮಂಕು ಕವಿದಂತೆ ಇತ್ತು. ಜೊತೆಗೆ ಸೋನೆ ಮಳೆ. ಕಾಡು ದಾರಿ. ಇದೇನು ಹುಚ್ಚು? ಕಾಗದ ಬರೆಯುತ್ತಿದ್ದ ಒಂದೇ ಕಾರಣಕ್ಕೆ ಕರೆದಲ್ಲಿಗೆ ಬಂದೆನಲ್ಲ. ಬ್ರಾಹ್ಮಣರ ಮನೆಯ ದೀಪಾವಳಿಯಲ್ಲಿ ಹಂದಿ ತಿನ್ನುವ ಕೊಡವನನ್ನು ಅವರು ಹೇಗೆ ನೋಡಬಹುದು. ತಪ್ಪು ಮಾಡಿದೆ ಎಂದೆಲ್ಲಾ ಯೋಚನೆಗಳು ಪುನಃ ಬರುತ್ತಿದ್ದಂತೆಯೇ ಸಿದ್ದಾಪುರವೂ ಬಂದುಬಿಟ್ಟಿತ್ತು. ನಮ್ಮ ಹಳೆಯ ಗೋಣಿಕೊಪ್ಪ ಬಸ್ ನಿಲ್ದಾಣದ ಹಾಗಿದ್ದ ಸಿದ್ದಾಪುರದಲ್ಲಿ ಬಸ್ಸಿಳಿದು ಸುಧಾರಿಸಿಕೊಂಡು ಸುತ್ತಲೂ ಒಮ್ಮೆ ಕಣ್ಣಾಡಿಸುತ್ತಾ ಇದ್ದಾಗಲೇ ಹಿಂದಿನಿಂದ “ಅಣ್ಣಾ” ಎಂದು ಯಾರೋ ಕರೆದಂತಾಯಿತು. ಅದು ಆಕೆಯೇ. ದೀಪಾವಳಿಗೆ ಮನೆಗೆ ಬರಲು ಒತ್ತಾಯ ಮಾಡಿದವಳು ಕರೆದೊಯ್ಯಲು ಬಸ್ ಸ್ಟ್ಯಾಂಡಿಗೆ ಬಂದಿದ್ದಳು. ಸುಮಾರು ೧೯-೨೦ ರ ವಯಸ್ಸು. ಹವ್ಯಕ ಬ್ರಾಹ್ಮಣರ ಹುಡುಗಿ ಉಷಾ ಹೆಗಡೆ.
ಊರಲ್ಲದ ಊರು. ಗುರುತು ಪರಿಚಯದವರು ಯಾರೂ ಇಲ್ಲದ ಜಾಗ. ಕಾಗದದಲ್ಲಿ ಮಾತ್ರ ಸಂಪರ್ಕ. ಬ್ರಾಹ್ಮಣರ ಮೇಲೆ ಸದಾ ಸಂಶಯ ಹೊಂದಿದವ ಭಂಡ ಧೈರ್ಯದಿಂದ ಹೋಗಿದ್ದ. ಏನೋ ಒಂದು ಬಂಧ ಅಳುಕಿನ ನಡುವೆಯೂ ಅಷ್ಟು ದೂರ ಕರೆದುಕೊಂಡು ಹೋಗಿತ್ತು. ಆಕೆಯ ಮನೆಗೆ ಸಿದ್ದಾಪುರದಿಂದ ಇನ್ನೂ ಹತ್ತಾರು ಕಿಮೀ ಹೋಗಬೇಕಿತ್ತು. ಸಿದ್ದಾಪುರದಿಂದ ಬಸ್ಸು ಬಿದ್ರಕಾನ ಎಂಬಲ್ಲಿಗೆ ಕರೆದೊಯ್ದಿತ್ತು. ಪಟಪಟ ಮಳೆ ಬೀಳುತ್ತಲೇ ಇತ್ತು. ಗ್ರಾಮಾಂತರ ಸಾರಿಗೆಯ ಹಳೇ ಬಸಿಗೆ ಹತ್ತಿಸಿದ ಉಷಾ ಹೆಗಡೆ ದಾರಿಯುದ್ದಕ್ಕೂ ವಟಗುಟ್ಟುತ್ತಲೇ ಇದ್ದಳು. ದೂರದ ಊರಿಂದ ಸ್ವಂತ ಅಣ್ಣನೇ ಬಂದಿದ್ದಾನೇನೋ ಎಂಬ ಖುಷಿ ಆಕೆಯಲ್ಲಿ ಕಾಣುತ್ತಿತ್ತು. ಚೋಟುಮೆಣಸಿನ ಕಾಯಿಯಂತಿದ್ದ ಆಕೆ ರೂಪವತಿಯಾಗಿರಲಿಲ್ಲ. ಶೋಕಿ ತಿಳಿದಿರಲಿಲ್ಲ. ದಾರಿಯುದ್ದಕ್ಕೂ ಆಕೆ ಉತ್ತರ ಕನ್ನಡವನ್ನು ವಿವರಿಸುತ್ತಿದ್ದಳು. ಈ ದಾರಿಯಲ್ಲಿ ಸಾಗಿದರೆ ಇಂತಿಂಥ ಯಕ್ಷಗಾನ ಕಲಾವಿಧರ ಮನೆ ಸಿಗುತ್ತದೆ ಎಂದೋ ಅಲ್ಲಿಂದ ತಿರುಗಿದರೆ ಇಂತಿಂಥ ಪತ್ರಕರ್ತರ ಮನೆ ಸಿಗುತ್ತದೆ ಎಂದು ಹೇಳುತ್ತಲೇ ಇದ್ದಳು. ಒಡನೆಯೇ ಮೌನವಾಗುತ್ತಿದ್ದಳು. ಕೂಡಲೇ ಯಕ್ಷಗಾನದ ಹಾಡೊಂದನ್ನು ಗುನುಗಿಕೊಳ್ಳುತ್ತಿದ್ದಳು. ಪುನಃ ವಟಗುಟ್ಟುತ್ತಿದ್ದಳು. ಬಿದ್ರಕಾನ ಎಂಬಲ್ಲಿ ಇಳಿದು ಆಕೆಯ ಮನೆಗೆ ಇನ್ನೂ ೭ ಕಿಮೀ ನಡೆದುಕೊಂಡು ಹೋಗಬೇಕಿತ್ತು. ಸ್ವಲ್ಪ ದೂರ ಡಾಂಬರು ರಸ್ತೆ. ಅಲ್ಲಿಂದ ಮಣ್ಣಿನ ರಸ್ತೆ. ಮುಂದೆಲ್ಲಾ ಕಾಲುದಾರಿ. ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಕಾಣುವ ಸಾಲು ಬೆಟ್ಟಗಳಂತೆ ಇಲ್ಲೂ ದೂರದಲ್ಲಿ ಕಾಣುವ ಸಾಲು ಬೆಟ್ಟಗಳು. ಕುರುಚಲು ಕಾಡುಗಳು. ಅಡಿಕೆ ತೋಟಗಳು. ತೊರೆಗಳನ್ನು ಹಾರಿಸಿ. ಗುಡ್ಡವನ್ನು ಹತ್ತಿಸಿ ಕೊರಕಲಿನಲ್ಲಿ ಇಳಿಸಿ ಆಕೆ ತನ್ನ ಸಣ್ಣ ಮನೆಗೆ ಕರೆದುಕೊಂಡು ಹೋದಳು. ಎರಡು ಮನೆಗಳನ್ನು ಬಿಟ್ಟರೆ ಆಸುಪಾಸಿನಲ್ಲಿ ಎಲ್ಲೂ ಮನೆಗಳ ಸುಳಿವಿಲ್ಲ.
ನಾಲ್ಕು ಕೋಣೆಗಳ ಆ ಮನೆ ತೀರಾ ಸಣ್ಣದಿತ್ತು.  ಸೆಗಣಿ ಸಾರಿಸಿದ ನೆಲ. ಬಾಯಲ್ಲಿ ಸದಾ ಕವಳ ತುಂಬಿರುವ ಅಪ್ಪ. ಸರಳತೆಯೇ ಮೂರ್ತಿವೆತ್ತಂತೆ, ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಂತೆ ಕಾಣುವ ಉಷಾ ಹೆಗಡೆಯ ಅಮ್ಮ. ಮಾರು ದೂರದಲ್ಲಿ ಐದು ದೇಸೀ ಹಸು ಮತ್ತು ಮೂರು ಕರುಗಳಿರುವ ಕೊಟ್ಟಿಗೆ. ಅದುವರೆಗೆ ಆರೆಸ್ಸೆಸ್‌ನ ಬ್ರಾಹ್ಮಣರ ಮನೆಗಳಿಗೆ ಹೋಗಿದ್ದೆನೇ ಹೊರತು ಸಿದ್ದಾಂತಿಗಳಲ್ಲದವರ ಮನೆಗಳಿಗೆ ಹೋಗಿದ್ದು ಅದೇ ಮೊದಲು. ಅತಿಥಿ ಸತ್ಕಾರದಲ್ಲಿ ಕೊಡವರನ್ನೇ ಮೀರಿಸುವವರು ಈ ಉತ್ತರ ಕನ್ನಡದ ಹವ್ಯಕರು ಎಂದು ಆರಂಭದಲ್ಲೇ ಅರಿವಾಗಿತ್ತು. ಜಾತಿ ಕೇಳಲಿಲ್ಲ. ಕುಲ ವಿಚಾರಿಸಲಿಲ್ಲ. ಶಿವರಾಮ ಕಾರಂತರ ಬೆಟ್ಟದ ಜೀವ ನೆನಪಾಗಿತ್ತು.
ಜಾತಿ ಕೇಳದೆ ಊಟ ಹಾಕಿದ್ದಷ್ಟೇ ಆಗಿದ್ದರೆ ಅದೇನೂ ದೊಡ್ಡ ವಿಷಯವಾಗುತ್ತಿರಲಿಲ್ಲ.
ಕಡು ಬಡತನದಲ್ಲಿ ಇಬ್ಬರು ಮಕ್ಕಳನ್ನು ಸಾಕುತ್ತಿದ್ದ ಉಷಾ ತಂದೆ ಸುಬ್ರಾಯ ಹೆಗಡೆಯರು ಮಗಳನ್ನು ಹತ್ತನೇ ತರಗತಿಗೇ ಓದು ನಿಲ್ಲಿಸಿದ್ದರು. ಮಗನನ್ನು ಉಡುಪಿ ಮಠದಲ್ಲಿ ಬಿಟ್ಟು ಸಂಸ್ಕ್ರತ ಕಲಿಸುತ್ತಿದ್ದರು. ಹತ್ತನೇ ತರಗತಿ ಮುಗಿಸಿದ ಉಷಾಳನ್ನು ಬೆಂಗಳೂರಿನ ಸಂಬಂಧಿಕರ ಬೇಕರಿಯೊಂದಕ್ಕೆ ಕೆಲಸಕ್ಕೆ ಕಳುಹಿಸಿದ್ದರು. ಸಣ್ಣ ಹುಡುಗಿ ಓದಿನಿಂದ ವಂಚಿತಳಾದಳು. ಓದಬೇಕೆಂಬ ತುಡಿತದಿಂದ ಸಿಕ್ಕಸಿಕ್ಕಿದ್ದನ್ನೂ ಓದತೊಡಗಿದಳು. ಹತ್ತಿರದ ಗ್ರಂಥಾಲಯದಿಂದ ಪುಸ್ತಕಗಳನ್ನು ತಂದು ಓದಿದಳು. ಓದಿನ ಹುಚ್ಚು ಅವಳಲ್ಲಿ ಅರಿವನ್ನು ಮೂಡಿಸತೊಡಗಿತು. ಆಕೆಯ ಓದಿನ ಹುಚ್ಚು ಎಷ್ಟರ ಮಟ್ಟಿಗೆ ಇತ್ತೆಂದರೆ ಆ ವಯಸ್ಸಿಗೇ ಆಕೆ ಜಿಡ್ಡು ಕ್ರಷ್ಣಮೂರ್ತಿಗಳನ್ನೂ ಓದಿ ಮುಗಿಸಿದ್ದಳು. ಸ್ವಂತಿಕೆ ಬೆಳೆಯತೊಡಗಿತು. ದೊಡ್ಡದೊಡ್ಡವರನ್ನು ಓದಿದ ಪಕ್ವತೆಯಿಂದಲೋ ಏನೋ ಹಲವು ಬರಹಗಳ ತಪ್ಪುಗಳು ಸುಲಭವಾಗಿ ಆಕೆಗೆ ತಿಳಿದುಬಿಡುತ್ತಿದ್ದವು. ಎಡ ಬಲ ಪಂಥದ ಬಗ್ಗೆ ಯಾರೂ ಆಕೆಯ ತಲೆ ತುಂಬದೇ ಇದ್ದರೂ ಅಗಾಧ ಓದಿನಿಂದ ಆಕೆಯಲ್ಲಿ ರಾಷ್ಟ್ರೀಯ ಭಾವನೆ ಮತ್ತು ಹಿಂದುತ್ವದ ಸಿದ್ದಾಂತಗಳು ಒಪ್ಪಿಗೆಯಾದವು. ಅಕಸ್ಮತ್ತಾಗಿ ಪತ್ರಿಕೆಯಲ್ಲೆಲ್ಲೋ ಸಿಕ್ಕ ವಿಳಾಸದಿಂದ ಪತ್ರ ಬರೆದಳು. ಸ್ಪುಟವಾದ ಅಕ್ಷರ, ವಾಕ್ಯವನ್ನು ಪೋಣಿಸುವ ಧಾಟಿ ಅಲ್ಲಲ್ಲಿ ಉಲ್ಲೇಖಿಸುತ್ತಿದ್ದ ದೊಡ್ಡವರ ವಾಕ್ಯಗಳು ವಿದ್ವಾಂಸರಿರಬೇಕೇನೋ ಎನ್ನುವಂತಿದ್ದವು. ಆಕೆಯ ಪತ್ರಕ್ಕೆ ಪ್ರತಿಕ್ರಿಯೆ ಕೊಡದಿರಲು ಸಾಧ್ಯವೇ ಇಲ್ಲ ಎಂಬಷ್ಟರಮಟ್ಟಿಗೆ ಅವು ಪ್ರಬುದ್ದವಾಗಿರುತ್ತಿದ್ದವು. ಹೀಗೆ ಪತ್ರ ಸಂವಾದದಿಂದ ಬೆಳೆದ ಆತ್ಮೀಯತೆ ನನ್ನನ್ನು ದೂರದ ಹಳ್ಳಿಗೆ ಕರೆದೊಯ್ದಿತ್ತು. ಯಂತ್ರಗಳನ್ನು ಕಳಚಬೇಕೆಂಬ ಹುಚ್ಚು ಆಕೆಯಲ್ಲಿತ್ತು. ಹಾಗಾಗಿ ಆಕೆ ವೊಬೈಲ್ ಇಟ್ಟುಕೊಂಡಿರಲಿಲ್ಲ. ಹಳ್ಳಿಗೆ ಮರಳಬೇಕೆಂಬ ಆಸೆಯಿತ್ತು. ಆದರೆ ಹಳ್ಳಿಗೆ ಹೋದರೆ ಪುಸ್ತಕಗಳಿಲ್ಲದೆ ಬದುಕುವುದು ಆಕೆಗೆ ಅಸಾಧ್ಯವಾಗಿತ್ತು. ಸುದೀರ್ಘ ಪತ್ರದ ಮೂಲಕ ಆಕೆ ಸಂಪೂರ್ಣ ಉತ್ತರ ಕನ್ನಡದ ಪರಿಸ್ಥಿತಿಯನ್ನು ತಿಳಿಸುತ್ತಿದ್ದಳು. ಹವ್ಯಕ ಸಮಾಜದ ಸಮಸ್ಯೆಗಳನ್ನು ಆಕೆ ಹಿಂದೂ ಸಮಾಜದ ಸಮಸ್ಯೆ ಎಂದೇ ಬರೆಯುತ್ತಿದ್ದಳು.  “ನಿಜಕ್ಕೂ ಇಡೀ ಬೆಂಗಳೂರೇ ಒಂದು ಹಳ್ಳಿ. ನಮ್ಮ ಉತ್ತರ ಕನ್ನಡ ಹಾಳು ಬೀಳುತ್ತಿದೆ”,  “ಕನ್ನಡದ ಮೊದಲ ರಾಜಧಾನಿ ನಮ್ಮ ಜಿಲ್ಲೆಯಲ್ಲಿದೆ. ಇಲ್ಲಿನವರು ಅತೀ ಹೆಚ್ಚಾಗಿ ಹೊಸ ರಾಜಧಾನಿಯಲ್ಲಿ ನೆಲೆ ಕಂಡುಕೊಡಿದ್ದಾರೆ. ದೆಹಲಿಯಿಂದ ದೇವಗಿರಿಗೆ ವಲಸೆ ಬಂದಂತೆ ನಾವೂ ವಲಸೆ ಬಂದಿದ್ದೇವೆ” ಎಂದು ಬರೆಯುತ್ತಿದ್ದಳು. “ಈ ಗೋಡ್ಸೆ ಓರ್ವ ತಲೆ ಕೆಟ್ಟ ಮನುಷ್ಯನೇ ಸರಿ. ಗಾಂಧೀ ಸತ್ತರೆ ದೇಶ ಉದ್ದಾರವಾಗುತ್ತದೆ ಎಂದುಕೊಂಡ ಮೂರ್ಖ ಆತ. ಅಂತವನು ನೆಹರೂನನ್ನು ಏಕೆ ಬಿಟ್ಟ?” ಎಂದು ತಲೆಗೆ ಹುಳ ಬಿಡುತ್ತಿದ್ದಳು.  “ಭೈರಪ್ಪನವರನ್ನು ರೂಪಿಸಿದ್ದೇ ಆನಂದ ಕುಮಾರಸ್ವಾಮಿಯವರು. ಅವರ ಬಗ್ಗೆ ಇದುವರೆಗೂ ಕನ್ನಡದಲ್ಲಿ ಒಂದೇ ಒಂದು ಪುಸ್ತಕ ಬಂದಿಲ್ಲವಂತೆ”,  “ಪಿವಿ ಕಾಣೆಯವರ ಪುಸ್ತಕ ಪ್ರಕಟಣೆಗೆ ನಮ್ಮ ಪ್ರೋಫೇಸರುಗಳು ರಾಜಕೀಯ ಮಾಡಿ ವಿರೋಧ ಮಾಡಿದ್ದರಂತಲ್ಲ”, “ಮೀಸಲಾತಿಯ ವಿಪರ್ಯಾಸಗಳಿಗೆ ಸ್ವತಃ ನಾನೇ ಉದಾಹರಣೆ. ಓದುವ ಆಸೆ. ಆದರೆ ಗತಿ ಇಲ್ಲ . ನಾನೇನು ಇಷ್ಟಪಟ್ಟು ಹವ್ಯಕಳಾಗಿ ಹುಟ್ಟಿದೆನೇ?” ಎಂಬ ವಿಷಯಗಳನ್ನೂ ಬರೆಯುತ್ತಿದ್ದಳು. ಕನ್ನಡದ ಅಷ್ಟೂ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಆಕೆ ಓದುತ್ತಿದ್ದಳು. ಒಂದು ಪತ್ರದಲ್ಲಿ  “ಪಿಳ್ಳೈ ಎಂಬ ಸರ್ ನೇಮ್ ತಮಿಳಲ್ಲಿ ಮಾತ್ರ ಅಲ್ಲ. ಮಲಯಾಳಿ ನಾಯರ್ ಗಳಲ್ಲೂ ಇರುತ್ತವೆ”ಎಂದು ಬರೆದಿದ್ದಳು. ಆಕೆಯ ಪತ್ರಕ್ಕೆ ಉತ್ತರ ಬರೆಯಲು ನಿಜಕ್ಕೂ ಹೆದರಿಕೆ ಉಂಟಾಗುತ್ತಿತ್ತು. ಜೊತೆಗೆ ಆಕೆ ಅಣ್ಣ ಎಂದು ಹಚ್ಚಿಕೊಂಡಿದ್ದಳು. ದೀಪಾವಳಿಗೆ ಬರದಿದ್ದರೆ ದೀಪವೇ ಹಚ್ಚಲಾರೆ ಎಂದು ಕೂತಿದ್ದಳು.
ದಿನಕಳೆದಂತೆ ಉಷಾ ಹೆಗಡೆ ತಾನು ಬೇಕರಿಯಲ್ಲಿ ಕಳೆದುಹೋಗಬಾರದು ಎಂದುಕೊಂಡಳು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಉತ್ತರ ಕನ್ನಡಕ್ಕೆ ಮರಳಿದಳು. ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಅಡಿಕೆಯಿತ್ತು. ಸ್ವಲ್ಪ ಭತ್ತದ ಗದ್ದೆಯಿತ್ತು. ವರ್ಷಕ್ಕೆ ಎರಡು ಬೆಳೆ ತೆಗೆಯುತ್ತೇನೆ ಎಂದು ಹೊರಟಳು. ತಾನೇ ಪೈರು ಕಿತ್ತಳು, ನೆಟ್ಟಳು. ಹಸುಗಳ ಪಾಲನೆ ಮಾಡಿದಳು. ತಾನೇ ಡೈರಿಗೆ ಹಾಲು ಹಾಕಿ ಬರುತ್ತಿದ್ದಳು. ಏಳು ಕಿ.ಮೀ ದೂರದ ಬಿದ್ರಕಾನಕ್ಕೆ ನಡೆದು ಕಾಗದ ಪೋಸ್ಟ್ ಮಾಡಿ ಬರುತ್ತಿದ್ದಳು. ದೊಡ್ಡಪ್ಪನಿಂದ ಯಕ್ಷಗಾನದ ಹಾಡುಗಳನ್ನು ಕಲಿತಳು.
ದೀಪಾವಳಿಗೆ ಕರೆದು ತಲೆಗೆ ಎಣ್ಣೆ ಹಾಕಿ ತಟ್ಟಿ, ದೇವಸ್ಥಾನಕ್ಕೆ ಕರೆದುಕೊಂಡ ಹೋದ ಹುಡುಗಿ ಪುಕುವೋಕನ ಕಥೆಯನ್ನು ತನ್ನ ಗದ್ದೆಯಲ್ಲಿ ಕುಳಿತು ಹೇಳಿದಳು. ಮಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯದ ಗಲಾಟೆಯನ್ನು ಕೇಳಿ ತಿಳಿದುಕೊಂಡಳು. “ವಿಶೇಷ ಕೃಷಿ ವಲಯ” ಮಾಡಿದರೆ ಹಳ್ಳಿಗಳು ಉಳಿದುಕೊಳ್ಳುತ್ತಿತ್ತು ಎಂದಳು.  ಉತ್ತರ ಕನ್ನಡದ ಹಳ್ಳಿಗಳು ಹೇಗೆ ವ್ರದ್ದಾಶ್ರಮಗಳಾಗುತ್ತಿವೆ, ಯುವಕರು ಮದುವೆಯಾಗದೇ ಹೇಗೆ ಉಳಿಯುತ್ತಿದ್ದಾರೆ ಎಂಬುದನೆಲ್ಲಾ ಹೇಳಿದಳು. ತಾನು ಮದುವೆ ಅನ್ನೋದು ಆಗುವುದಿದ್ದರೆ ಕ್ರಷಿಕರು ಅಥವಾ ಅರ್ಚಕರನ್ನೇ ಆಗುತ್ತೇನೆ ಎಂಬ ನಿಶ್ಚಯ ಮಾಡಿದ್ದೇನೆ ಎಂದೂ ತಿಳಿಸಿದಳು. ಎರಡು ದಿನ ಸಂಪೂರ್ಣ ಉತ್ತರ ಕನ್ನಡದ ಬಗ್ಗೆ ಪಾಠ ಮಾಡಿ ಕಳುಹಿಸಿಕೊಡುವಾಗ ಆಕೆ ಕಣ್ಣೀರಾದಳು. ಅದೇ ಕೊನೆ ಮತ್ತೆ ಉಷಾ ಹೆಗಡೆಯನ್ನು ನೋಡಲಿಲ್ಲ. ಕೆಲದಿನಗಳಲ್ಲಿ ಮದುವೆ ನಿಶ್ಚಯವಾಗಿದೆಯೆಂದೂ ಗಂಡು ಶಿರಸಿಯ ಹತ್ತಿರ ಓರ್ವ ಅರ್ಚಕನೆಂದೂ ಹೇಳಿದಳು. ಕೆಲವರ್ಷ ಸುದ್ದಿಯೇ ಇಲ್ಲದಿದ್ದ ಉಷಾ ಗಂಡು ಮಗುವಾಯಿತೆಂದು ಪತ್ರ ಬರೆದಳು. ಗಟ್ಟಿಗಿತ್ತಿ ಹುಡುಗಿ ಉಷಾ ಹೆಗಡೆ ಕಳೆದುಹೋದಳೇ ಎನ್ನಿಸಿತ್ತು. ಕೆಲದಿನಗಳಲ್ಲೇ ಮತ್ತೊಂದು ಪತ್ರದಲ್ಲಿ ಹಾಳು ಬಿಟ್ಟಿದ್ದ ಭತ್ತದ ಗದ್ದೆಯನ್ನು ಉಳುಮೆ ಮಾಡುತ್ತಿದ್ದೇನೆಂದೂ ಓದು ಸಂಪೂರ್ಣ ನಿಂತೇ ಹೋಗಿದೆಯೆಂದೂ ತಿಳಿಸಿದ್ದಳು. ಜಾಗತೀಕರಣಕ್ಕೆ ಉಷಾ ಸಮರ್ಥ ಉತ್ತರದಂತೆ ಕಂಡಳು. ಉತ್ತರ ಕನ್ನಡದ ಸಮಸ್ಯೆಯ ಬಗ್ಗೆ ವೈಚಾರಿಕವಾಗಿ ಮಾತಾಡುವವರೆಲ್ಲಾ ಆಕೆಯ ಮುಂದೆ ಕುಬ್ಜರಾದಂತೆ ಕಂಡರು. ಗಟ್ಟಿಗಿತ್ತಿ ಹೆಣ್ಣು ಮತ್ತೆಂದೂ ಪತ್ರ ಬರೆಯಲಿಲ್ಲ. ಬೆಳಗುವ ಹಣತೆಗೆ ಇನ್ನು ಯಾರ ಹಂಗು ಎನ್ನಿಸಿತೋ ಏನೋ.
ಪ್ರತೀ ದೀಪಾವಳಿ ಬಂದಾಗಲೂ ಉಷಾ ಹೆಗಡೆ ಮನೆಯ ದೀಪಾವಳಿ ನೆನಪಾಗುತ್ತದೆ. ನುಡಿದಂತೆ ನಡೆವ ಆಕೆ ನೆನಪಾಗುತ್ತಾಳೆ. ಆಗಾಗ್ಗೆ ಆಕೆ ಮುದ್ದಿಡುತ್ತಿದ್ದ ಕರುಗಳು ನೆನಪಾಗುತ್ತವೆ. ಇಂದು ಎಷ್ಟೊ ನಾಯಕರು, ಎಷ್ಟೋ ಸಂಘಟನೆಗಳು ಉತ್ತರ ಕನ್ನಡದ ಹಳ್ಳಿಗಳನ್ನು ಉಳಿಸಲು, ಯುವಕರಿಗೆ ಮದುವೆ ಮಾಡಿಸಲು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗಿಂತಲೂ ದೊಡ್ಡವಳು ನಮ್ಮ ಉಷಾ ಹೆಗಡೆ. ಅವೆಲ್ಲವನ್ನೂ ಆಕೆ ಪರರಿಗೆ ಭೋದಿಸಲಿಲ್ಲ. ತಾನೇ ಸ್ವತಃ ಮಾಡಿದಳು. ಸಣ್ಣ ಹುಡುಗಿಯೊಬ್ಬಳು ಎರಡನೇ ಬೆಳೆ ತೆಗೆಯುವುದು ಸಾಮಾನ್ಯದ ಸಂಗತಿಯಲ್ಲ. ತವರನ್ನು ಬೆಳಗಿದ ಆಕೆ ಗಂಡನ ಮನೆಯಲ್ಲೂ ಹಾಗೆ ಬದುಕಿದಳು. ಹೋದಲ್ಲೆಲ್ಲಾ ಬೆಳಗುವುದೇ ಹಣತೆಯ ಕೆಲಸವಲ್ಲವೇ? ಆ ಹಣತೆ ಸದಾ ಬೆಳಗುತ್ತಿರಲಿ.

4 Comments

  1. ನಾನು ಬಿದ್ರಕಾನ ಗ್ರಾಮದ ಹುಡುಗ, , ಉಷಾ ಹೆಗಡೆ ಯಾರು ಎ೦ದು ನನಗೆ ನೆನಪಾಗುತ್ತಿಲ, ಅವರು ಯಾರು ಎ೦ದು ಕೇಳಬಹುದೆ?

  2. ನಮಗೆ ತಿಳಿಯದ ಒಂದು ಸುಂದರ ಜಗತ್ತನ್ನು ನಿಮ್ಮ ಲೇಖನ ತೆರೆದಿಟ್ಟಿತು. ಉಷಾ ಹೆಗಡೆ ನಮ್ಮ ಹೃದಯಗೆದ್ಡ ಸೋದರಿಯಾಗಿಬಿಟ್ಟರು. ಅವರಿಗೆ ಶುಭಕೋರುತ್ತಾ..

  3. ಜಾಗತೀಕರಣದ ಮಾಯಾಲೋಕದಲ್ಲಿ ಬಹುರಾಷ್ರಿಯ ಕಂಪನಿಗಳ ಗುಲಾಮಗಿರಿಯಲ್ಲಿ ಕಳೆದು ಹೋಗುತ್ತಿರುವ ಯುವ ಜನತೆಗೆ, ಹವಾ ನಿಯಂತ್ರಣ ಕೋಣೆಯಲ್ಲಿ ಕುಳಿತು ಹಳ್ಳಿಗಳ ಸಮಸ್ಯೆ ಅರಿಯುವ ಬುದ್ದಿ ಜೀವಿಗಳಿಗೆ ಉಷಾ ಹೆಗಡೆ ಒಂದು ಸರಳವಾದ ಪಾಠ.

Leave a comment