ವಸ್ತ್ರಸಂಹಿತೆ; ಈಗ ಹಿಂದುಗಳ ಪಾಳಿ!

ಮಾರ್ಚ್ ೩ರಂದು ಮದ್ರಾಸ್ ಹೈಕೋರ್ಟ್ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದ ಮಹತ್ವದ ತೀರ್ಪೊಂದನ್ನು ನೀಡಿದಾಗ ಸಮಸ್ತ ಕರ್ನಾಟಕ ಹಿಜಾಬಿನ ಗಲಾಟೆಯಲ್ಲಿ ಮುಳುಗಿತ್ತು! ಅತ್ತ ತಮಿಳುನಾಡಿನಲ್ಲೊಬ್ಬರು ಹಿಂದೂ ದೇವಸ್ಥಾನಗಳ ಪಾವಿತ್ರ್ಯತೆಯ ರಕ್ಷಣೆಗಾಗಿ ಕಾನೂನಿನ ಮೊರೆ ಹೋಗಿದ್ದರೆ, ಇತ್ತ ಕರ್ನಾಟಕದಲ್ಲಿ ದೊಡ್ಡ ಗುಂಪೊಂದು ಸರ್ಕಾರದ ನಿರ್ದೇಶನದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಒಂದೆಡೆ ಮತೀಯ ಉಡುಪಿನ ಜಿದ್ದು, ಇನ್ನೊಂದೆಡೆ ಹಿಂದೂ ಸಂಪ್ರದಾಯದ ರಕ್ಷಣೆಗೆ ಹೋರಾಟ! ಒಂದೆಡೆ ನ್ಯಾಯಾಂಗದ ಮೇಲಿನ ನಂಬಿಕೆ, ಇನ್ನೊಂದೆಡೆ ವಸ್ತ್ರಕ್ಕಾಗಿ ನ್ಯಾಯಾಂಗವನ್ನೂ ಕ್ಕರಿಸುವ ಅಸಹನೆ. ಒಂದೆಡೆ ವಸ್ತ್ರಕ್ಕಾಗಿ ವ್ಯವಸ್ಥೆಯನ್ನೇ ಅಲ್ಲಾಡಿಸುವ ಮತಾಂಧತೆ, ಮತ್ತೊಂದೆಡೆ ಪರಂಪರೆ ನಾಶವಾಗುತ್ತಿದೆಯಲ್ಲಾ ಎಂಬ ಅಸಹಾಯಕತೆ!
ಶಿಥಿಲವಾಗುತ್ತಿರುವ ಹಿಂದೂ ಸಂಪ್ರದಾಯದ ಆಚರಣೆ ಮತ್ತು ಮತೀಯ ಅಸಹನೆಯ ಭಯಾನಕತೆಗಳೆರಡೂ ಏಕಕಾಲಕ್ಕೆ ವ್ಯಕ್ತವಾಗುವಂತಿದ್ದವು. ಅಷ್ಟಕ್ಕೂ ಮದ್ರಾಸ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದಿಷ್ಟು:
“ಹಿಂದೂ ದೇವಸ್ಥಾನಗಳ ಪಾವಿತ್ರ್ಯವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಪಾರಂಪರಿಕ ಸಂಪ್ರದಾಯ, ಕಟ್ಟಳೆ ಮತ್ತು ಸಂಪ್ರದಾಯಕ್ಕನುಗುಣವಾಗಿ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತರಿಗೆ ಇಂತದ್ದೇ ವಸ್ತ್ರಸಂಹಿತೆ ಇರಬೇಕೆಂದು ನಿರ್ದೇಶಿಸುವ ಹಕ್ಕು ಮತ್ತು ಸ್ವಾತಂತ್ರ್ಯವು ದೇವಸ್ಥಾನದ ಮಂಡಳಿಗಿದೆ. ಪ್ರತೀ ದೇಗುಲದ ನಿರ್ವಹಣಾ ಮಂಡಳಿಯು ದೇವಸ್ಥಾನದ ಪ್ರವೇಶದ್ವಾರದಲ್ಲಿಯೇ ಪುರುಷ ಮತು ಮಹಿಳೆಯರಿಗೆ ವಸ್ತ್ರ ಸಂಹಿತೆಯನ್ನು ಸೂಚಿಸುವ ಫಲಕವನ್ನು ಹಾಕಿ ಅದರಂತೆ ನಡೆದುಕೊಳ್ಳಲು ಭಕ್ತರಿಗೆ ಆದೇಶಿಸಬಹುದು”
ದೇಶಾದ್ಯಂತ ಹಿಜಾಬ್ ಚರ್ಚೆ ನಡೆಯುತ್ತಿದ್ದಾಗ ಮದ್ರಾಸ್ ಹೈಕೋರ್ಟ್ ನೀಡಿದ ಈ ತೀರ್ಪು ಹಿಂದೂ ದೇವಸ್ಥಾನಗಳಲ್ಲಿ ಮಹಾನ್ ಪರಿವರ್ತನೆಯೊಂದಕ್ಕೆ ಕಾರಣವಾಗಿಬಿಡುತ್ತದೆ ಎಂದೇನೂ ಅಲ್ಲ. ಆದರೆ ಈ ತೀರ್ಪು ಹಲವು ಕಾರಣಗಳಿಂದ ಮಹತ್ವದ್ದು ಎನ್ನಲು ಕಾರಣಗಳಿವೆ.
ದೇವಸ್ಥಾನದ ವಿವೇಚನಾಕಾರಕ್ಕೆ ಕಾನೂನು ಚೌಕಟ್ಟನ್ನು ಕೊಟ್ಟದ್ದು ಅದೇ ಮೊದಲು. ಮದ್ರಾಸ್ ಹೈ ಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ, “ರಂಗರಾಜನ್ ನರಸಿಂಹನ್ vs ಅಡಿಷನಲ್ ಚೀಫ್ ಸೆಕ್ರೆಟರಿ ಆಫ್ ಗೌರ್ನಮೆಂಟ್ ಮತ್ತಿತರರು” ಎಂಬ ಮೊಕದ್ದಮೆ ಹಲವು ಜಿಜ್ಞಾಸೆಗೆ ಅವಕಾಶಗಳನ್ನು ತೆರೆದಿಡುತ್ತವೆ. ಪ್ರಕರಣದ ಹಿನ್ನೆಲೆ ಹೀಗಿದೆ. ಅರ್ಜಿದಾರ ತಮಿಳುನಾಡಿನ ನಿವಾಸಿ ರಂಗರಾಜನ್ ನರಸಿಂಹನ್, ಶ್ರೀರಂಗಂ ದೇವಸ್ಥಾನಕ್ಕೆ ಪದೇ ಪದೇ ಭೇಟಿ ಕೊಡುತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ಅನ್ಯ ಮತೀಯರಷ್ಟೇ ಅಲ್ಲದೆ ಸ್ವಧರ್ಮೀಯರೂ ಹಿಂದೂ ಧರ್ಮಾಚರಣೆಗೆ ಪೂರಕವೆನಿಸದ ಉಡುಗೆಗಳನ್ನು ತೊಟ್ಟು ಬರುವುದನ್ನು ಕಂಡು ಮನನೊಂದು ಶಾಸ್ತ್ರಗಳಲ್ಲಿ ದೇವಸ್ಥಾನದ ದರ್ಶನಕ್ಕೂ ವಸ್ತ್ರಸಂಹಿತೆಯ ಅಗತ್ಯವಿರುವುದನ್ನು ಮನಗಂಡು ಮದ್ರಾಸ್ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಮ್ಯಾಂಡಮಸ್ ರಿಟ್) ಸಲ್ಲಿಸಿದ್ದರು. “ಘನ ನ್ಯಾಯಾಲಯಕ್ಕೆ ಪ್ರತೀ ದೇವಸ್ಥಾನಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸ್ತ್ರಸಂಹಿತೆಯ ವಿವರಗಳನ್ನೊಳಗೊಂಡ ಫಲಕವನ್ನು ಅಳವಡಿಸುವಂತೆ ಮೊಕದ್ದಮೆಯ ಮೂರನೇ ಪ್ರತಿವಾದಿಗೆ ಅಂದರೆ ಸರ್ಕಾರದ ಧಾರ್ಮಿಕ-ದತ್ತಿ ಇಲಾಖೆಗೆ ನಿರ್ದೇಶನವನ್ನು ನೀಡಬೇಕು” ಎಂದೂ ಹಾಗು “ಸನಾನತ ಹಿಂದೂ ಧರ್ಮದಲ್ಲಿ ಆಸಕ್ತಿ ಇಲ್ಲದ ನಾಸ್ತಿಕರಿಗೆ ಪ್ರವೇಶವನ್ನು ನಿರಾಕರಿಸಬೇಕೆಂದೂ” ಮನವಿ ಮಾಡುತ್ತಾರೆ. ತಮ್ಮ ಅರ್ಜಿಯನ್ನು ತಾವೇ ವಾದ ಮಾಡುತ್ತಾ ಅರ್ಜಿದಾರರು “ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗು ಧರ್ಮಾದಾಯ ದತ್ತಿಗಳ ಅದಿನಿಯಮ ೧೯೫೯” ರಲ್ಲಿ ಕೇವಲ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರು ದೇವಾಲಯಗಳಿಗೆ ಪ್ರವೇಶಿಸಬಹುದೆಂಬ ಉಲ್ಲೇಖವಿದ್ದರೂ, ಅನ್ಯಮತೀಯರು, ಹಿಂದೂ ಧರ್ಮದ ಮೇಲೆ ನಂಬಿಕೆಯಿಲ್ಲದವರು ವಸ್ತ್ರಸಂಹಿತೆಯನ್ನು ಪಾಲಿಸದೆ ದೇವಸ್ಥಾನಕ್ಕೆ ಪ್ರವೇಶಿಸಿ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿರುವುದರ ಬಗ್ಗೆ ಸಾಕ್ಷ್ಯಗಳನ್ನು ನೀಡಿದ್ದರು.
ಪ್ರತಿವಾದಿಗಳ ಪರ ವಾದ ಮಂಡಿಸಿದ ಪ್ರಧಾನ ವಕೀಲರು ಕೆಳ ನ್ಯಾಯಾಲಯದ ತೀರ್ಪೋಂದನ್ನು ಉಲ್ಲೇಖಿಸಿ ಈಗಾಗಲೇ ವಸ್ತಸಂಹಿತೆಯ ಬಗೆಗೆ ಕಾಳಜಿ ಇರುವ ಹಲವಾರು ದೇವಸ್ಥಾನ ಮಂಡಳಿಗಳು ಫಲಕಗಳನ್ನು ಹಾಕಿ ಭಕ್ತರಿಗೆ ವಸ್ತ್ರಸಂಹಿತೆಯನ್ನು ಆದೇಶಿಸುವ ಪದ್ದತಿಯಿದ್ದು ಈ ವಿವೇಚನಾಕಾರವನ್ನು ಅವರಿಗೇ ಬಿಡಬಹುದೇ ಹೊರತು ಈ ಕುರಿತು ಸರಕಾರಕ್ಕೆ ಸಾರ್ವತ್ರಿಕ ನಿರ್ದೇಶನವೊಂದನ್ನು ಹೊರಡಿಸುವಂತೆ ಕೋರುವುದು ಸಾಧ್ಯವಿಲ್ಲ ಎನ್ನುತ್ತಾರೆ.
ಇವೆಲ್ಲವನ್ನೂ ಆಲಿಸಿದ ಮದ್ರಾಸ್ ಉಚ್ಚನ್ಯಾಯಾಲಯವು ತನ್ನ ತೀರ್ಪಿನಲ್ಲಿ, ೧೯೪೭ರ ತಮಿಳುನಾಡು ದೇವಸ್ಥಾನಗಳ ಪ್ರವೇಶಾಕಾರ ಕಾಯ್ದೆಯ ರೂಲ್ ೪ ಅನ್ನು ಉಲ್ಲೇಖಿಸಿ “ದೇವಸ್ಥಾನದ ಕಟ್ಟಳೆ, ಸಂಪ್ರದಾಯದಂತೆ ಸ್ನಾನ ಮಾಡದೆ, ಸಾಂಪ್ರದಾಯಿಕ ಉಡುಪನ್ನು ಧರಿಸದೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಚಪ್ಪಲಿ ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ” ಎಂಬ ಅಂಶಗಳನ್ನು ಗುರುತಿಸಿ ತೀರ್ಪನ್ನು ಕೊಡುತ್ತದೆ.
ಪ್ರತೀ ಹಿಂದೂ ದೇವಸ್ಥಾನದ ಮಂಡಳಿಗಳೂ ಆಯಾ ಸಂಪ್ರದಾಯವನ್ನಾಧರಿಸಿ ತಮ್ಮದೇ ಆದ ವಸ್ತ್ರಸಂಹಿತೆಯನ್ನು ರೂಪಿಸಿಕೊಳ್ಳಬಹುದು ಮತ್ತು ಅದನ್ನು ಫಲಕದಲ್ಲಿ ಅಳವಡಿಸಿ ಪ್ರವೇಶ ದ್ವಾರದಲ್ಲಿ ಪ್ರಕಟಿಸಬಹುದು. ಅದರ ಸಂಪೂರ್ಣ ಅಧಿಕಾರ ಆಯಾ ದೇವಸ್ಥಾನ ಆಡಳಿತ ಮಂಡಳಿಗಳಿಗೆ ಇದೆ. ಇದರಲ್ಲಿ ಸರಕಾರ ಪಾಲ್ಗೊಳ್ಳಲು ಸೂಚಿಸುವ ಅವಶ್ಯಕತೆಯಾಗಲೀ, ಸಾರ್ವತ್ರಿಕ ನಿರ್ದೇಶನದ ಅವಶ್ಯಕತೆಯಾಗಲಿ ಇಲ್ಲ ಎನ್ನುತ್ತದೆ. ಆದರೆ ಹಿಂದೂ ದೇವಸ್ಥಾನಗಳಿಗೆ ಸಾಂಪ್ರದಾಯಿಕ ಉಡುಪನ್ನು ಧರಿಸಿ ಹೋಗಬೇಕೆಂಬ ಕಾನೂನಿನ ಅಪೇಕ್ಷೆ ಇರುವುದನ್ನು ಗುರುತಿಸುತ್ತದೆ.
ಹಿಂದೂ ಸಂಪ್ರದಾಯಗಳು ಮತ್ತು ಆಚರಣೆಗಳು ಬರಬರುತ್ತಾ ಕುಸಿಯುತ್ತಿವೆ ಎಂಬುದಕ್ಕೆ ಈ ತೀರ್ಪು ಒಂದು ಉದಾಹರಣೆ. ಏಕೆಂದರೆ ಹಿಂದೂ ದೇವಸ್ಥಾನಗಳ ಪಾವಿತ್ರ್ಯತೆ, ಶಿಷ್ಟಾಚಾರವನ್ನು ಕಾಪಾಡಿ ಎಂದು ನ್ಯಾಯಾಲಯದ ಮೊರೆ ಹೋಗುವ ಕಾಲಕ್ಕೆ ಹಿಂದುಗಳು ಬಂದು ಮುಟ್ಟಿದ್ದಾರೆ! ಅಂದರೆ ಹಿಂದು ತನ್ನ ಧರ್ಮವನ್ನು ರಕ್ಷಿಸಲು ಕೂಡಾ ನ್ಯಾಯಾಲಯದ ಮೇಲೆ ನಂಬಿಕೆ ಇರಿಸಿಕೊಳ್ಳುತ್ತಾನೆ. ಎಲ್ಲಕ್ಕಿಂತ ಆಘಾತ ಎನಿಸುವುದು ದೇವಸ್ಥಾನಗಳಿಗೆ ಚಪ್ಪಲಿ ಧರಿಸಿ ಹೋಗಬಾರದು ಎಂಬ ನಿಯಮವನ್ನು ನಲ್ವತ್ತೇಳರ ಕಾಯ್ದೆ ಹೇಳಿದೆ ಎಂದು ನ್ಯಾಯಾಲಯವೇ ಮನವರಿಕೆ ಮಾಡಿಕೊಟ್ಟಿದೆ! ಅದೇ ಇನ್ನೊಂದೆಡೆ ಕಾನೂನುಗಳೇನೇ ಹೇಳಲಿ ನಮ್ಮ ವಸ ಸಂಹಿತೆ ನಮಗೆ ಮುಖ್ಯ ಎನ್ನುವ ಸಮುದಾಯದದೊಂದಿಗೆ ಹಿಂದೂ ಬದುಕುತ್ತಿದ್ದಾನೆ. ಇದೇಕೆ ಹೀಗೆ ಎಂದು ನೋಡಿದರೆ ನಮಗೆ ಹಲವು ಉತ್ತರಗಳು ಸಿಗಲಾರಂಭಿಸುತ್ತವೆ. ಎಲ್ಲವನ್ನೂ ಕಾನೂನಿನ ಬಾಯಲ್ಲಿ ಹೇಳಿಸಿ ಪಾಲಿಸುವ ಹಿಂದೂ ಔದಾರ್ಯ, ಅದರಿಂದ ಮೂಡಿದ ಜಡತ್ವ. ಆಧುನಿಕ ಶಿಕ್ಷಣದಿಂದಲೇ ಸಂಸ್ಕಾರ ಎಂಬ ಬೋಳೆತನಗಳು ಕಾಣಿಸಲಾರಂಭಿಸುತ್ತವೆ. ಅಂದರೆ ವಸ್ತ್ರಸಂಹಿತೆಯನ್ನು ಮುಸಲ್ಮಾನರ ಹಿಜಾಬಿನೊಂದಿಗೆ ಮುಖಾಮುಖಿಯಾಗಿಸುವ ಹಿಂದೂ ಸ್ವಭಾವದ ಹಿಂದೆ ಮಹಾನ್ ವಿಸ್ಮೃತಿಯೊಂದಿದೆ ಎನ್ನುವುದೇ ಹಿಂದುವಿಗೆ ಮರೆಯಾಗಿಹೋಗಿದೆ. ಆಧುನಿಕ ಕಾರ್ಪೋರೇಟ್ ಜಗತ್ತಿನಲ್ಲೂ ಒಂದು ವಸ್ತ್ರಸಂಹಿತೆ ಎನ್ನುವುದಿದ್ದರೆ ಹಿಂದೂಶಾಸ್ತ್ರದಲ್ಲಿ ಅದು ಇರಲಿಕ್ಕಿಲ್ಲವೇ ಎನ್ನುವ ಪ್ರಶ್ನೆ ನಮಗೆ ಈ ಕಾಲದಲ್ಲೂ ಮೂಡುತ್ತಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ವಸ್ತ್ರಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಆದರೆ ದೇವಸ್ಥಾನಗಳಲ್ಲಿ…? ಇಂದು ಯಾವ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಪಾಲನೆಯಾಗುತ್ತಿದೆ ಎಂದು ನೋಡಿದರೆ ನಮಗೆ ರಂಗರಾಜ್ ನರಸಿಂಹನ್ ಅವರಂತೆ ಮನಸ್ಸಿಗೆ ಘಾಸಿಯಾಗದಿರದು. ಏನೇನೋ ನೆಪಗಳು, ಪ್ರವಾಸಿ ತಾಣವೆಂಬ ಸಮಜಾಯಿಷಿ, ಇನ್ನು ಕೆಲವೆಡೆ ಪುರೋಹಿತಶಾಹಿತ್ವದ ಹೇರಿಕೆ ಎಂಬ ತರ್ಕ, ಇವು ನಮಗಲ್ಲ ಎಂಬ ಅಹಮಿಕೆ! ಹಿಂದುಗಳಿಗೆ ಮಾತ್ರ ಮೂಡುವ ಇಂಥಾ ಚಿಂತನೆಗಳು ಇಂದು ಯಾವ ಪರಿಯಲ್ಲಿ ಹರಡಿವೆಯೆಂದರೆ ಸಾರ್ವತ್ರಿಕವಾಗಿ ವಸ್ತ್ರಸಂಹಿತೆ ಮುಖ್ಯವಲ್ಲ ಎಂಬ ಧೋರಣೆಯೇ ಬಲಿತಿದೆ. ಶಾಸ್ತ್ರಸಮ್ಮತವಲ್ಲದ ತೀರ್ಥಯಾತ್ರೆಗಳ ಭರಾಟೆ ಎಗ್ಗಿಲ್ಲದೆ ಸಾಗುತ್ತಿವೆ. ಹಾಗಾದರೆ ಶಾಸ್ತ್ರಗಳೇನು ಹೇಳುತ್ತವೆ? ಶಾಸ್ತ್ರಗಳಲ್ಲಿ ಉಲ್ಲೇಖಿತ ಕಟ್ಟಳೆಗಳೆಲ್ಲವನ್ನೂ ಇಂದೂ ಪಾಲಿಸಬೇಕೇ?
ಶಾಸ್ತ್ರಗಳಲ್ಲಿ ಉಲ್ಲೇಖಿತ ಕೆಲ ಅಂಶಗಳನ್ನೇ ಗಮನಿಸಿ,
ವೇದ ಮಂತ್ರವೊಂದು ಹೀಗೆ ಹೇಳುತ್ತದೆ. ನ ವಿ ವಿವಸನಸ್ನಾಯಾತ್. ಗುಹ್ಯೋ ವಾ ಏಷೋಗ್ನಿಃ ಏತಸ್ಯಾಗ್ನೇರತಿದಾಹಾಯ… ಅಂದರೆ ದೇಹದಲ್ಲಿ ಗುಹ್ಯಾಗ್ನಿಗಳಿರುತ್ತವೆ. ಅದನ್ನು ರಕ್ಷಣೆ ಮಾಡುವುದು ಬಟ್ಟೆ. ಅದಕ್ಕಾಗಿ ಉಡುವ ಬಟ್ಟೆಯ ಮೇಲಿನ ಗಮನವೂ ಮುಖ್ಯ. ತೈತ್ತಿರೀಯಾರಣ್ಯಕದ ಮೊದಲ ಭಾಗದಲ್ಲಿ ವಸ್ತ್ರರಹಿತರಾಗಿ ಸ್ನಾನವನ್ನೂ ಮಾಡಬಾರದು. ಏಕೆಂದರೆ ಅರುಣಕೇತುಕಾಗ್ನಿಯು ನೀರಿನಲ್ಲಿ ಅಗೋಚರನಾಗಿರುತ್ತಾನೆ. ಹಾಗೆ ಮಾಡುವುದರಿಂದ ಅಗ್ನಿಯು ದಹಿಸದಂತಾಗುತ್ತದೆ ಎಂದು ಹೇಳುತ್ತದೆ. ವಿಷ್ಣು ಸಹಸ್ರನಾಮದಲ್ಲಂತೂ, ವಾಸನಾ ವಾಸುದೇವಸ್ಯ… (ವಾಸ ಎಂದರೆ ಉಡುಪು ಎಂಬರ್ಥವಿದೆ) ಎನ್ನುತ್ತದೆ. ಅಂದರೆ ಉಟ್ಟಿರುವ ಬಟ್ಟೆಯಲ್ಲೂ ನಾನು ನೆಲೆಸಿದ್ದೇನೆ ಎನ್ನುವ ಅರ್ಥವೂ ಇದೆ. ಮತ್ತೊಂದು ವೇದಮಂತ್ರದಲ್ಲಿ,
ಯುವಾ ಸುವಾಸಾಃ ಅಷ್ಟಾಚಕ್ರಾ ನವದ್ವಾರಾ
ದೇವಾನಾಂ ಪೂರಯೋ‘ ತಸ್ಯಾಗ್ಂ ಹಿರಣ್ಮಯಃ ಕೋಶಃ
ಸ್ವರ್ಗೋ ಲೋಕೋ ಜ್ಯೋತಿಷಾವ್ರತಃ
ಮನುಷ್ಯನ ದೇಹ ದೇವತೆಗಳ ಪಟ್ಟಣವಾಗಿರುವ ಕಾರಣದಿಂದ ಅವುಗಳನ್ನು ಸಂರಕ್ಷಣೆ ಮಾಡಬೇಕು, ಅದರಿಂದ ದೇಹದ ಹಿರಣ್ಮಯ ಕೋಶಗಳು ಜಾಗೃತಗೊಳ್ಳುತ್ತವೆ ಎಂದು ಹೇಳಿದೆ. ಅಷ್ಟೇ ಅಲ್ಲ, ಹೊಸ ಬಟ್ಟೆ ಉಡುವ ಮುಂಚೆ ದೇವರ ಮುಂದಿಟ್ಟು ತೊಡುವ ಸಂಪ್ರದಾಯವೂ ಹಿಂದೂ ಸಂಪ್ರದಾಯದಲ್ಲಿದೆ! ಎಲ್ಲಕ್ಕಿಂತ ಹೆಚ್ಚಾಗಿ ನಾವು ಹಾಕಿಕೊಂಡಿರುವ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂಬ ಆಧುನಿಕ ವ್ಯಾಖ್ಯಾನವೂ ಇದೆ. ಧರ್ಮಶಾಸ್ತ್ರ ಕೂಡಾ ಗೃಹಸ್ಥರು, ಬ್ರಹ್ಮಚಾರಿಗಳು, ಕುಮಾರಿಯರು ಏಕವಸ್ತ್ರವನ್ನು ಧರಿಸಬಾರದು, ದ್ವಿವಸ್ತ್ರದಲ್ಲಿರಬೇಕು, ಅಂತ್ಯ ಸಂಸ್ಕಾರ ಹೊರತುಪಡಿಸಿ ಹರಿದ ಬಟ್ಟೆಯನ್ನು ಬಳಸಬಾರದು ಎನ್ನುತ್ತದೆ. ಪಂಚೆ, ಶಲ್ಯ, ಸೀರೆಕುಪ್ಪಸಗಳಿಗೆ ಅದರದ್ದೇ ಆದ ಮಹತ್ವಗಳಿವೆ. ಇಷ್ಟಲ್ಲದೇ ವೈವಿಧ್ಯತೆಯಿಂದ ಕೂಡಿರುವ ಹಿಂದೂ ಸಂಪ್ರದಾಯದಲ್ಲಿ ಇನ್ನೂ ಅನೇಕ ಉಡುಗೆಗಳನ್ನು ತೊಡುವ ಪರಂಪರೆ ಇದೆ.
ವಿಚಿತ್ರವೆಂದರೆ ಪಾಪಗಳನ್ನು ಪುಣ್ಯಗಳಾಗಿ ಪರಿವರ್ತಿಸಿಕೊಳ್ಳಲು ದೇವಸ್ಥಾನಕ್ಕೆ ಹೋಗುವವರಿಗೂ ಯಾಕೋ ವಸ್ತ್ರಸಂಹಿತೆ ಮುಖ್ಯವಾಗುವುದಿಲ್ಲ ಎನ್ನುವುದು ಹಿಂದೂ ಸಮಾಜದ ಘೋರ ದುರಂತಗಳಲ್ಲಿ ಒಂದು! ಒಟ್ಟಾರೆ ಹೇಳುವುದಾದರೆ ಹಿಂದೂ ಶಾಸ್ತ್ರಗಳಲ್ಲಿ ಬಟ್ಟೆ ಎನ್ನುವುದು ಮಾನ ಮುಚ್ಚಿಕೊಳ್ಳುವ ಸಂಗತಿಗಿಂತ ಹೆಚ್ಚಾಗಿ ಶ್ರದ್ಧೆ ಮತ್ತು ದೈವತ್ವದ ಸಂಕೇತ ಎನ್ನುವುದನ್ನು ಹಿಂದು ಮರೆತ ಪರಿಣಾಮವೇ ರಂಗರಾಜನ್ ನರಸಿಂಹನ್ ಅವರಂತವರು ಕಾನೂನಿನಿಂದಾದರೂ ಅದನ್ನು ಸರಿಪಡಿಸಲು ನೋಡುತ್ತಾರೆ. ಮದ್ರಾಸ್ ಹೈಕೋರ್ಟಿನ ಈ ತೀರ್ಪನ್ನು ಧರ್ಮಾಚರಣೆಯ ಕಣ್ಣಿಂದ ನೋಡುವವರಿಗೆ ಇದು ಮಹತ್ವದ್ದು ಎಂದೇ ಅನಿಸುತ್ತದೆ. ಎರಡು ವರ್ಷಗಳ ಹಿಂದೆ ಹಿಂದೂ ಸಂಘಟನೆಗಳು ದಕ್ಷಿಣ ಕನ್ನಡದ ೨೦೦ ದೇವಸ್ಥಾನಗಳಲ್ಲಿ ಕಡ್ಡಾಯ ವಸ್ತ್ರಸಂಹಿತೆಯನ್ನು ರೂಪಿಸಬೇಕು ಎಂದು ಅಭಿಯಾನ ನಡೆಸಿದಾಗ ನಾಸ್ತಿಕರೂ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು! ಅಲ್ಲದೆ ಇಂದು ಕರ್ನಾಟಕದ ಎಲ್ಲಾ ದೇವಸ್ಥಾನಗಳೂ ಪ್ರವಾಸಿತಾಣವಾಗಿ ಬದಲಾಗಿವೆ. ಹಾಗಾಗಿ ಇದು ಕೇವಲ ತಮಿಳುನಾಡಿನ ದೇವಸ್ಥಾನಗಳ ಪ್ರಶ್ನೆಯಲ್ಲ. ಕಟ್ಟುನಿಟ್ಟಿನ ವಸ್ತ್ರಸಂಹಿತೆ ಕರ್ನಾಟಕದ ದೇವಸ್ಥಾನಗಳಲ್ಲೂ ಜಾರಿಯಾಗಬೇಕಾಗಿದೆ. ಹಿಂದುಗಳು ವಸ್ತ್ರಸಂಹಿತೆಯನ್ನು ದೇವಸ್ಥಾನದಲ್ಲಿ ಮಾತ್ರ ಜಾರಿಮಾಡಬೇಕು ಎಂದು ಒತ್ತಾಯಿಸುತ್ತಾರೆ ಎಂಬುದನ್ನು ಸರ್ಕಾರಗಳು ಮತ್ತು ನ್ಯಾಯಾಲಯ ಈ ಪ್ರಕರಣದಿಂದ ತಿಳಿಯಬೇಕು. ತಮಿಳುನಾಡು ಪ್ರಕರಣದಲ್ಲಿ ಕೂಡಾ ರಂಗರಾಜನ್ ಸರ್ಕಾರಿ ಕಛೇರಿಗಳಲ್ಲೋ ಅಥವಾ ಶಾಲಾಕಾಲೇಜುಗಳಲ್ಲೋ ವಸ್ತ್ರಸಂಹಿತೆಯನ್ನು ಹೇರಲು ಹೊರಟಿರಲಿಲ್ಲ ಎಂಬುದನ್ನು ಸಮಾಜವೂ ಅರಿಯಬೇಕು. ಮುಸಲ್ಮಾನರು ನಾವು ಹೀಗೇ ಬದುಕುತ್ತೇವೆ ಎಂದು ಕೊಂಬು ಕೋರೆಗಳನ್ನು ಮೂಡಿಸಿಕೊಂಡು ಹೇಳುತ್ತಿರುವ ಈ ಹೊತ್ತಿನಲ್ಲಿ ನಮ್ಮ ದಾರಿಯನ್ನು ನಾವು ಕಂಡುಕೊಳ್ಳಲು ಮತ್ತು ನಮ್ಮ ವಿಸ್ಮೃತಿಯನ್ನು ತೊಲಗಿಸಿಕೊಳ್ಳಲು ಇದು ಸರಿಯಾದ ಕಾಲ. ಇದು ಕಾಲಕ್ಕೆ ಮತ್ತು ಪರಿಸ್ಥಿತಿಗೆ ಉತ್ತರವೂ ಹೌದು.

Leave a comment