ಕೊಡಗಿಗೇಕೆ ಬಿತ್ತು ಕೇಡಿಗ ಸಂತಾನದ ಕಾಕದೃಷ್ಟಿ

ಗಡಿ ಎಂದರೆ ಹಾಗೆಯೇ. ಗಡಿ ಹಂಚಿಕೊಂಡ ಎರಡು ದೇಶಗಳು, ಎರಡು ರಾಜ್ಯಗಳು, ಎರಡು ಜಿಲ್ಲೆಗಳು, ಎರಡು ತಾಲೂಕುಗಳು, ವಿಧಾನಸಭಾ ಕ್ಷೇತ್ರದಿಂದ ಹಿಡಿದು ಎರಡು ತೋಟಗಳ ಗಡಿಗಳೂ ಕೂಡ ಸಮಸ್ಯೆಗಳ ಯಾವುದಾದರೂ ಒಂದು ರೂಪವನ್ನು ಹೊದ್ದಿರುತ್ತವೆ. ಹಾಗಾಗಿ ಗಡಿ ಇರುವಲ್ಲಿ ನೆಮ್ಮದಿ ಇರುವುದು ಕಡಿಮೆ. ಸದಾ ಬಿಗು, ಆತಂಕ, ಗೊಂದಲ, ಸಂಶಯಗಳು ಗಡಿಯಲ್ಲೇ ಜನ್ಮತಾಳಿವೆಯೋ ಎಂಬಂತೆ ಕಾಣುತ್ತಿರುತ್ತವೆ. ಗಡಿಗಳು ಸುಲಭವಾಗಿ ವಿವಾದದ ಕೇಂದ್ರಗಳಾಗಿ ಬದಲಾಗುವುದು, ಹಕ್ಕು ಸ್ಥಾಪನೆಯ ಪ್ರಯತ್ನಗಳು ಗಡಿಯಲ್ಲೇ ಪ್ರಾರಂಭವಾಗುವುದು, ಗಡಿ ಹಾರುವ ಯತ್ನಗಳು ಯುದ್ಧದ ವರೆಗೂ ಮುಂದುವರಿಯುವುದು… ಹೀಗೆ ಗಡಿಗಳ ಬಗ್ಗೆ ಬರೆದಷ್ಟೂ ಮುಗಿಯದ ಸರಕುಗಳಿವೆ. ಹೇಳಿದಷ್ಟೂ ಮುಗಿಯದ ಸಂಗತಿಗಳಿವೆ. ಹಾಗಿರುವುದಕ್ಕೋ ಏನೋ ಮೊನ್ನೆ ರಾಜ್ಯ ವಿಧಾನಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು “ಕೊಡಗು-ಕೇರಳ ಗಡಿಯಲ್ಲಿ ಅಕ್ರಮ ಚಟುವಟಿಕೆಗಳು ತೀವ್ರವಾಗಿ ನಡೆಯುತ್ತಿವೆ, ಅದನ್ನು ನಿಲ್ಲಿಸಿ” ಎಂದು ಆಗ್ರಹಿಸಿದಾಗ, ಗೃಹ ಸಚಿವರು “ಶೀಘ್ರ ಕ್ರಮ ಕೈಗೊಳ್ಳುತ್ತೇವೆ” ಎಂದದ್ದು ಅಚ್ಚರಿಯೇನೂ ಅನಿಸಲಿಲ್ಲ. ಅಲ್ಲದೇ ನೂರು ವರ್ಷಗಳಿಗೆ ಹಿಂದೆ ಆಗ್ರಹಿಸಬೇಕಾಗಿದ್ದ ಸಂಗತಿಯನ್ನು ಈಗ ಎಲ್ಲವೂ ಮುಗಿದುಹೋದಮೇಲೆ ಆಗ್ರಹಿಸಿದರಲ್ಲಾ ಎಂದೂ ಕೊಡಗಿನ ಜನರಿಗೆ ಅನಿಸಿತ್ತು.

ಏಕೆಂದರೆ ಇಂದು ಕೊಡಗು ಅನುಭವಿಸುತ್ತಿರುವ ಟಾಪ್ ನೂರು ಸಮಸ್ಯೆಗಳನ್ನು ಪಟ್ಟಿಮಾಡಿ, ಅದರ ಮೂಲವನ್ನು ಶೋಧಿಸಿದರೆ ಎಲ್ಲಾ ಮೂಲಗಳು ಮುಟ್ಟುವುದು ಕೇರಳಕ್ಕೆ! ಅಂದರೆ ಕೇರಳದ ಕೇಡಿಗ ಸಂತಾನವೊಂದರ ಕಾಕದೃಷ್ಟಿಗೆ ಬಿದ್ದು ಕೊಡಗು ಹಾಳಾಯಿತು ಎಂಬ ಉತ್ತರ ಧುತ್ತೆಂದು ಎದುರು ನಿಲ್ಲುತ್ತದೆ. ಹಾಗಾದರೆ ಕೊಡಗಿಗೂ ಕೇರಳಕ್ಕೂ ಇರುವ ಸಾಮಾಜಿಕ, ಸಾಂಸ್ಕೃತಿಕ ನಂಟಿನ ಕಥೆಯೇನಾಯಿತು? ಕೇರಳದಿಂದ ಕೊಡಗಿಗೆ ಅಂಥ ಹಾನಿಯೇನಾಗಿದೆ? ಶಂಕರಾಚಾರ್ಯ, ನಾರಾಯಣಗುರುಗಳಂಥ ಮಹಾತ್ಮರನ್ನು ದೇಶಕ್ಕೆ ಕೊಟ್ಟ ಕೇರಳ ಪುಟ್ಟ ಕೊಡಗಿಗೇನು ಹಾನಿಯನ್ನುಂಟುಮಾಡೀತು? – ಇತ್ಯಾದಿ ಪ್ರಶ್ನೆಗಳು ಇಲ್ಲಿ ಅಪ್ರಸ್ತುತ. ಏಕೆಂದರೆ ಅಂಥ ಶ್ರೇಷ್ಠ ಇತಿಹಾಸದ ಕೇರಳ ಮತಾಂಧತೆ ಮತ್ತು ಪರಕೀಯ ಕಮ್ಯುನಿಸಮ್ಮಿನ ಕಾರಣಕ್ಕೂ ಕುಖ್ಯಾತಿ ಪಡೆದ ರಾಜ್ಯ. ಅದರ ಬಿಸಿ, ಪಾರ್ಶ್ವ ಪರಿಣಾಮಗಳು ನೇರವಾಗಿ ಮುಟ್ಟುವುದು ಪಕ್ಕದ ಕೊಡಗಿಗೆ.

ಕೊಡಗು ಜಿಲ್ಲೆ ಮೂರು ಕಡೆಗಳಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿದೆ. ಈ ಮೂರು ಗಡಿಗಳೂ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮಹತ್ತ್ವದ್ದು. ಈ ಮೂರು ಕಡೆಗಳಲ್ಲಿ ಮೂರು ಹೆದ್ದಾರಿಗಳು ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುತ್ತವೆ. ಇವಲ್ಲದೆ ಬೆಟ್ಟದಾಚೆಯೆಲ್ಲೋ ನುಸುಳುವ ಕಾಲುದಾರಿಗಳೂ ಕೇರಳಕ್ಕೆ ದಾರಿ ತೋರಿಸುತ್ತವೆ. ಪೌರಾಣಿಕ ಐತಿಹ್ಯಗಳೂ ಈ ಕಾಲುದಾರಿಗಳಿವೆ. ಈ ಬೆಟ್ಟದಾಚೆಯಿಂದ ಬ್ರಾಹ್ಮಣ ವೇಷಧಾರಿಯಾಗಿ ಅರ್ಜುನ ಕೊಡಗಿನಲ್ಲಿ ಭಿಕ್ಷೆಗೆ ಬರುತ್ತಿದ್ದ, ವನವಾಸದಲ್ಲಿ ಪಾಂಡವರು ಈ ದಾರಿಯಲ್ಲಿ ತೆರಳಿದ್ದರು ಎನ್ನುವ ಕಥೆಗಳನ್ನು ಕೇರಳ ಮತ್ತು ಕೊಡಗಿನ ಜನ ಇಂದಿಗೂ ಹೇಳಿಕೊಳ್ಳುತ್ತಿರುತ್ತಾರೆ. ಅದಕ್ಕೆ ಸಾಕ್ಷಿಯೆಂಬಂತೆ ಇಂದಿಗೂ ಕೊಡಗಿನಿಂದ ಎತ್ತುಗಳು ಕೇರಳದ ಬೈತೂರು, ಪಯ್ಯನೂರುಗಳ ಶೈವಕ್ಷೇತ್ರಗಳಿಗೆ ಹೊರೆ ಕಾಣಿಕೆಯನ್ನು ಹೊತ್ತು ನಡೆಯುತ್ತವೆ.

ಇನ್ನೊಂದೆಡೆ ದಕ್ಷಿಣ ಕೊಡಗಿನ ಕುಟ್ಟದ ಮೂಲಕ ವಯನಾಡು ಜಿಲ್ಲೆಯ ತಿರುನೆಲ್ಲಿಯಲ್ಲಿ ನೆಲೆನಿಂತ ಪೆಮ್ಮಯ್ಯ ಪೆರುಮಾಳನೂ ಕೊಡಗಿನ ನಾಪೋಕ್ಲಿನಲ್ಲಿ ನೆಲೆನಿಂತ ಇಗ್ಗುತ್ತಪ್ಪನೂ ಸೋದರರು ಎಂದು ಕೇರಳ ಮತ್ತು ಕೊಡಗು ನಂಬುತ್ತವೆ. ತಿರುನೆಲ್ಲಿಯ ಪೆಮ್ಮಯ್ಯನ ಅಭಿಷೇಕಕ್ಕೆ ಕೊಡಗಿನ ಜಲವೇ ಬೇಕೆಂದು ಕಾಲುವೆಯೊಂದು ಕೂಡ ಶತಮಾನಗಳ ಹಿಂದೆಯೇ ರಚನೆಯಾಗಿದೆ. ಕೇರಳದ ಕಣ್ಣೂರು ಜಿಲ್ಲೆಯ ಪರಿಸಿನ್ನಕಡವು, ಪಯ್ಯನೂರು, ಇರಟ್ಟಿ, ಬೈತೂರು, ಮಾಡಯಿಕಾವು, ನೀಲೇಶ್ವರಗಳಿಗೆ ಅನಾದಿಯಿಂದಲೂ ಕೊಡಗಿನ ಭಕ್ತರು ತೀರ್ಥಯಾತ್ರೆಗೆ ಹೋಗುತ್ತಿದ್ದರೆಂಬುದಕ್ಕೆ ಸಾಕ್ಷಿಗಳಿವೆ. ಅಂದರೆ ಪುರಾಣಕಾಲದಿಂದಲೂ ಕೊಡಗಿಗೆ ಕೇರಳದ ನಂಟು ಗಾಢವಾಗಿತ್ತು. ಆಗ ಕೇರಳದಿಂದ ಕೊಡಗಿಗೂ, ಕೊಡಗಿನಿಂದ ಕೇರಳಕ್ಕೂ ಯಾವ ಸಮಸ್ಯೆಯೂ ಇರಲಿಲ್ಲ. ಹಾಗಾದರೆ ಸಮಸ್ಯೆ ಪ್ರಾರಂಭವಾಗಿದ್ದೆಲ್ಲಿಂದ?

ಕೊಡಗಿಗೂ ಕೇರಳಕ್ಕೂ ಇದ್ದ ವ್ಯಾಪಾರ ಸಂಬಂಧಕ್ಕೂ ಶತಮಾನಗಳ ನಂಟಿದೆ. ಆಗಲೂ ಕೇರಳದಿಂದ ಕೊಡಗಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಕೊಡಗಿನಿಂದ ಅಕ್ಕಿ, ಕರಿ ಮೆಣಸು ಮತ್ತು ಏಲಕ್ಕಿಗಳು ಕೇರಳಕ್ಕೂ, ಕೇರಳದಿಂದ ಉಪ್ಪು ಮತ್ತು ತೆಂಗು ಕೊಡಗಿಗೂ ಬರುತ್ತಿದ್ದವು. ಕೊಡಗಿನ ಕಾಡು ಉತ್ಪನ್ನಗಳಿಗೆ ಕೇರಳದ ಮಾರುಕಟ್ಟೆಯಿತ್ತು. ಅಷ್ಟೇ ಅಲ್ಲ. ಕೇರಳದ ಚೆರಕ್ಕಲ್ ರಾಜನಿಗೂ ಕೊಡಗಿನ ದೊಡ್ಡವೀರರಾಜೇಂದ್ರನಿಗೂ ಲೇವಾದೇವಿ ವ್ಯವಹಾರವಿತ್ತು. ಮಡಿಕೇರಿ ಅರಮನೆಯಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಕೇರಳದ ಓರ್ವ ರಾಜಪ್ರತಿನಿಧಿ ಬಂದು ಕೂತಿರುತ್ತಿದ್ದ. ಆಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಯಾವಾಗ ಟಿಪ್ಪು ಎಂಬ ರಕ್ಕಸ ಕಾಲಿಟ್ಟು, ಬ್ರಿಟಿಷರು ಆತನಿಗೆ ಸಮಾಧಿ ಕಟ್ಟಲು ಹೊರಟರೋ ಕೊಡಗಿನ ಸಮಾಜ ಮಹಾ ಸ್ಥಿತ್ಯಂತರವೊಂದಕ್ಕೆ ಹೊರಳಿಕೊಂಡಿತು.

ಸದಾ ಯುದ್ಧ, ನರಮೇಧ, ಮತಾಂತರಗಳಿಂದ ಸುಸ್ತಾಗಿಹೋಗಿದ್ದ ಕೊಡಗನ್ನು ದೂರದಲ್ಲಿ ನಿಂತು ಗಮನಿಸುತ್ತಿದ್ದ ಬ್ರಿಟಿಷರು ಸದ್ದಿಲ್ಲದೆ ನೀಲನಕ್ಷೆಯೊಂದನ್ನು ಸಿದ್ಧಪಡಿಸುತ್ತಿದ್ದರು. ೧೭೯೦ರಲ್ಲಿ ಕೇರಳದ ಕಣ್ಣೂರಿನ ಬ್ರಿಟಿಷ್ ಅಧಿಕಾರಿ ರಾಬರ್ಟ್ ಟೈಲರ್ ಮತ್ತು ಸೇನಾ ಮುಖ್ಯಸ್ಥ ಕ್ಯಾಪ್ಟನ್ ಬ್ರೌನ್ ಮಡಿಕೇರಿಯ ರಾಜನಿಗೆ ಪತ್ರವೊಂದನ್ನು ಕಳುಹಿಸಿದರು. ಆ ಪತ್ರದಲ್ಲಿ, ಟಿಪ್ಪುವಿನ ವಿರುದ್ಧ ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿಯೂ, ಕೇರಳದಿಂದ ಬೃಹತ್ ಸೈನ್ಯವೊಂದು ಕೊಡಗಿಗೆ ಬರುತ್ತಿರುವುದಾಗಿಯೂ, ದಂಡು ಉಳಿಯಲು ಸೂಕ್ತ ಜಾಗವೊಂದನ್ನು ಗುರುತಿಸಬೇಕೆಂದೂ, ಆ ಜಾಗ ಯಾವ ಕಾರಣಕ್ಕೂ ಮಡಿಕೇರಿ ಆಗಿರಬಾರದೆಂದೂ ತಿಳಿಸಲಾಗಿತ್ತು. ಆದರೆ ಅಂಥ ಜಾಗ ಕೊಡಗಿನಲ್ಲಿರಲಿಲ್ಲ. ಆದರೆ ರಾಜ ಹೆಗ್ಗಳ ಕಣಿವೆ ಮತ್ತು ಅಂಬಟ್ಟಿ ಬೆಟ್ಟದ ತಪ್ಪಲಿನ ದಟ್ಟ ಕಾಡನ್ನು ಕಡಿಸಿ ಪೇಟೆಯೊಂದನ್ನು ನಿರ್ಮಿಸಿ ಅದಕ್ಕೆ ತನ್ನ ಹೆಸರನ್ನಿಟ್ಟ. ಅದು ವೀರರಾಜೇಂದ್ರ ಪೇಟೆಯಾಯಿತು.

ದೊಡ್ಡರರಾಜೇಂದ್ರ ಬ್ರಿಟೀಷ್ ಸೈನ್ಯದ ಸ್ವಾಗತಕ್ಕೆ ಪೇಟೆಯಲ್ಲಿ ಬಂಗಲೆಗಳನ್ನೂ ಹೊಸ ಬೀದಿಗಳನ್ನೂ ನಿರ್ಮಿಸಿದ. ಬಾಂಬೆಯ ಗವರ್ನರ್ ಸರ್ ರಾಬರ್ಟ್ ಅಬರ್ ಕ್ರಾಂಬಿಯ ಸ್ವಾಗತಕ್ಕೆ ರಾಜ ಸಾವಿರ ಮಡಿಕೆಗಳಲ್ಲಿ ಸಾರಾಯಿಯನ್ನು ತಂದಿರಿಸಿದ. ಅಂದರೆ ವೀರಾಜಪೇಟೆ ಹುಟ್ಟಿದ ದಿನವೇ ಅಲ್ಲಿ ಹೆಂಡದ ಹೊಳೆ ಹರಿಯಿತು. ಅಲ್ಲದೆ ಬ್ರಿಟೀಷ್ ಸೈನ್ಯ ಕಣ್ಣೂರಿನಿಂದ ಆಗಮಿಸಲು ಹೆಗ್ಗಳ ಕಣಿವೆ, ಪೆರಂಬಾಡಿ, ಮಾಕುಟ್ಟ ಕಣಿವೆಯ ಕಾಡನ್ನು ಕಡಿಸಿ ರಾಜಮಾರ್ಗವನ್ನು ನಿರ್ಮಾಣ ಮಾಡಲಾಯಿತು. ಅದು ಮಲಾಬಾರ್ ರಸ್ತೆಯಾಯಿತು. ಬಹುಶಃ ಅಂದು ಮಲಾಬಾರ್ ರಸ್ತೆಗೂ ಈ ಮಾರ್ಗ ಭವಿಷ್ಯದಲ್ಲಿ ಕೊಡಗನ್ನು ಕುಲಗೆಡಿಸುತ್ತದೆ ಎಂದು ಗೊತ್ತಿರಲಿಲ್ಲ. ಮುಂದೆ ಕೊಡಗು ಬ್ರಿಟೀಷ್ ತೆಕ್ಕೆಗೆ ಜಾರಿದ್ದು, ಸಿ ಸಂಸ್ಥಾನವಾಗಿದ್ದು, ಮೈಸೂರಿಗೆ ವಿಲೀನವಾಗಿದ್ದು, ಜಿಲ್ಲೆಯಾಗಿದ್ದೆಲ್ಲವೂ ಇಂದು ಇತಿಹಾಸ.

ಆದರೆ ನಿರ್ಮಿಸಲಾಗಿದ್ದ ಹೊಸ ಮಲಬಾರ್ ರಸ್ತೆಯಲ್ಲಿ ಒಂದು ಕ್ಷಣವೂ ಪುರುಸೊತ್ತಿಲ್ಲವೆಂಬಂತೆ ಸಂಚಲನಗಳು ಆರಂಭವಾದವು. ಕೇರಳದಿಂದ ಒಳ್ಳೆಯದ್ದು ಮಾತ್ರ ಬರುತ್ತಿದ್ದ ಕಾಲ ಮುಗಿದು ಕೊಳಚೆಗಳೆಲ್ಲವೂ ಆ ದಾರಿಯ ಮೂಲಕ ವೀರಾಜಪೇಟೆಗೆ ಬರತೊಡಗಿದವು. ಮತಾಂಧತೆ ಬಂತು. ಅದರೊಂದಿಗೆ ರಾಜ ಕಟ್ಟಿದ ವೀರಾಜಪೇಟೆಯ ಸ್ವರೂಪವೂ ಬದಲಾಗತೊಡಗಿತು. ರಾಜಕೀಯ ಸಿದ್ಧಾಂತಗಳು ಬಂದವು. ಕಮ್ಯುನಿಸಂ ಬಂತು. ಕಾರ್ಮಿಕರು ಬಂದರು. ನೋಡನೋಡುತ್ತಲೇ ವೀರಾಜಪೇಟೆಯೂ ಮತ್ತೊಂದು ತಲಶ್ಶೇರಿಯೇನೋ ಎಂಬಂತೆ ಚಹರೆಯನ್ನು ಬದಲಿಸಿಕೊಂಡಿತು. ಬೃಹತ್ ಚರ್ಚುಗಳು, ಭಯಹುಟ್ಟಿಸುವ ಮಸೀದಿಗಳೂ ಬಂದವು. ಪೇಟೆ ಮಲಯಾಳಿಮಯವಾಯಿತು. ಸಂಪೂರ್ಣ ಕೊಡಗಿನ ವ್ಯಾಪಾರ ಮುಸಲ್ಮಾನರ ತೆಕ್ಕೆಗೆ ಜಾರಿತು. ಎಷ್ಟೆಂದರೆ ಶುಕ್ರವಾರದ ಪ್ರಾರ್ಥನೆ ಮುಗಿಯುವ ವರೆಗೆ ವ್ಯಾಪಾರಕ್ಕೆ ಬಂದವರು ಕಾಯಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.

ಇಷ್ಟೇ ಆಗಿದ್ದರೆ ಅದನ್ನು ಆರ್ಥಿಕ ಬದಲಾವಣೆ ಎಂದುಕೊಳ್ಳಬಹುದಿತ್ತು. ಆದರೆ ವೀರಾಜಪೇಟೆಯಿಂದ ಆರಂಭವಾದ ಸಾಮಾಜಿಕ ಬದಲಾವಣೆ ಇಡೀ ಕೊಡಗನ್ನು ವ್ಯಾಪಿಸಲಾರಂಭಿಸಿತು. ಕೇರಳದ ದನದ ಮಾಂಸಕ್ಕೆ ಕೊಡಗಿನ ದಷ್ಟಪುಷ್ಟ ಎತ್ತುಗಳು ಖಾಲಿಯಾಗತೊಡಗಿದವು. ದೇವರ ಕಾಡಿನ ಮರಗಳೂ, ಬೆಟ್ಟದ ಕಾಡುತ್ಪನ್ನಗಳೂ ಕೇರಳ ಮಾಪಿಳ್ಳೆಗಳ ಸ್ವತ್ತಾದವು. ವ್ಯಾಪಾರಿ ಎಂದರೆ ಕೇರಳದ ಮಾಪಿಳ್ಳೆಗಳು ಎನ್ನುವಷ್ಟು ಕೊಡಗು ಕೇರಳದ ಮಾಪಿಳ್ಳೆಗಳಿಗೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿತು. ಬುದ್ದಿಯನ್ನು ಕೇರಳಕರ್ಪಿಸಿಕೊಂಡಿತೇನೋ ಎಂಬಂತೆ ಕೊಡಗಿನ ಸಮಸ್ತ ಚಟುವಟಿಕೆಗಳೂ ಕೇರಳಮಯವಾಗತೊಡಗಿದವು. ಕೇರಳದಿಂದ ಬಂದು ವ್ಯಾಪಾರ ಆರಂಭಿಸಿದವರು ಕೊಡಗಿನಲ್ಲೇ ಮಳಿಗೆಗಳನ್ನಿಟ್ಟರು. ಕಾಫಿ, ಮೆಣಸು, ಏಲಕ್ಕಿಗಳ ಮಾರಾಟವೆಂದರೆ ಮಾಪಿಳ್ಳೆಗಳಿಗೆ ನೀಡುವುದು ಎನ್ನುವ ಧೋರಣೆ ಬೆಳೆಯಿತು. ವ್ಯಾಪಾರಕ್ಕೆ ಬಂದವ ಜಾಗ ಖರೀದಿಸಿದ. ಒಂದು ಕಾಲದಲ್ಲಿ ಕೊಡವರೇ ಆಗಿದ್ದ ಕೊಡವ ಮಾಪಿಳ್ಳೆಗಳೊಡನೆ ಸಂಬಂಧ ಬೆಳೆಸಿ ಅವರನ್ನು ಹಾಳು ಮಾಡಿದ. ಶುಂಠಿ ಕೃಷಿಯನ್ನು ಕೊಡಗಿಗೆ ಪರಿಚಯಿಸಿದ. ಕೊಡಗಿನ ಕಾಡುಗಳು ಖಾಂಡವವನದಂತೆ ದಹನವಾದವು. ಚಿಲ್ಲರೆ ಕಾಸಿಗೆ ಕೊಡಗಿನಾತ ಕೇರಳದವನ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ. ಹೊರೆಕಾಣಿಕೆ ಹೊತ್ತು ಸಾಗುತ್ತಿದ್ದ ಎತ್ತುಗಳು ಹಿಂಡುಹಿಂಡಾಗಿ ಕೇರಳಕ್ಕೆ ಗಡಿ ದಾಟಿ ಹೋದವು. ಕಳ್ಳತನ ಹೆಚ್ಚಾಯಿತು. ರಾಜಕೀಯ ಹತ್ಯೆಗಳನ್ನೂ ಕೇರಳ ಮಾಪಿಳ್ಳೆ ಕೊಡಗಿನಲ್ಲಿ ಪರಿಚಯಿಸಿದ.

ಇವಿಷ್ಟು ಹಗಲ ಬೆಳಕಿನಲ್ಲೇ ನಡೆದವು. ಆದರೆ ಮಲಬಾರ್ ರಸ್ತೆ ರಾತ್ರಿಯಾದೊಡನೆ ಬೇರೆಯೇ ಆದೊಂದು ಲೋಕಕ್ಕೆ ಜಾರುತ್ತದೆ. ಯಾರದ್ದೋ ತೋಟದ, ದೇವರಕಾಡುಗಳ ನಾಟಾಗಳು ಮಾಕುಟ್ಟ ಗಡಿ ದಾಟಿ ಎಲ್ಲೋ ಕೊಚ್ಚಿನ್ ಬಂದರಿಗೆ ಸಾಗುತ್ತವೆ. ಮದ್ಯದ ಕಳ್ಳಸಾಗಾಣಿಕೆ ಇಂದಿಗೂ ನಡೆಯುತ್ತಲೇ ಇದೆ. ಗಾಂಜಾದ ಘಾಟಿಗೆ ಹೆದ್ದಾರಿಯೇ ಅಮಲಿನಲ್ಲಿರುವಂತೆ ಕಾಣಿಸುತ್ತದೆ. ಎಲ್ಲೋ ಬೆಟ್ಟಗಳ ತಪ್ಪಲಿನಲ್ಲಿ ಸಂಶಯಾಸ್ಪದ ಓಔ ರಿಜಿಸ್ಟ್ರೇಶನ್ನಿನ ವಾಹನಗಳು ನಿಲ್ಲುತ್ತವೆ. ಎಲ್ಲೋ ಪಯ್ಯಾವೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ನಡೆಸಿದ ಗೂಂಡಾನಿಗೂ ಕೊಡಗು ಜಾಗ ಕೊಡುತ್ತದೆ. ಭೀತಿ ಹುಟ್ಟಿಸುವ ಗಡ್ಡಧಾರಿಗಳ ಭಾಷಣಗಳಿಗೆ ಬೆಂಗಾವಲಾಗಿ ಬರುವ ಕೇರಳದ ಕಾರ್ಯಕರ್ತರು, ಟಿಪ್ಪು ಜಯಂತಿಗೆ ಗಲಭೆ ಎಬ್ಬಿಸಲು ಬರುವವರು, ಮಾಕುಟ್ಟ ಗೇಟು ದಾಟಿದೊಡನೆ ತಿಲಕ ಧರಿಸಿ ಏಕಾಏಕಿ ಹಿಂದು ಕಾರ್ಯಕರ್ತರಾಗಿಬಿಡುವ ಕಾಮ್ರೆಡುಗಳು, ಮರಳು ದಂಧೆಯ ರೂವಾರಿಗಳು, ಶಾಮಿಲ್ ಮಾಲಿಕರು… ಹೀಗೆ ಪೆರಂಬಾಡಿ ಹೆದ್ದಾರಿ ರಾತ್ರಿ ಬೇರೆಯೇ ಆದ ಜನಗಳನ್ನು, ಲೋಕವನ್ನು ನೋಡುತ್ತದೆ.

ಇವೆಲ್ಲವೂ ಆಡಳಿತಕ್ಕೆ ತಿಳಿದಿರಲಿಲ್ಲವೇ ಎಂದರೆ ತಮಾಷೆಯ ಮಾತಾದೀತು. ಏಕೆಂದರೆ ಕೇರಳದಿಂದ ಶುಂಠಿ, ಮರಗೆಣಸು ನೆಡಲು ಬಂದವರು, ಮರಗಳ್ಳರು, ಮರಳು ಮಾಫಿಯಾದವರೆಲ್ಲರೂ ಇಲ್ಲಿ ರಾಜಕಾರಣಿಗಳಾಗಿ ಬೆಳೆದುಬಿಟ್ಟರು. ಹೇಗೂ ಕಾಂಗ್ರೆಸ್ ಇತ್ತಲ್ಲ. ಇವರೆಲ್ಲರೂ ಅವರ ಗೆಳೆಯರಾದರು. ಇಂದು ಕೊಡಗಿನ ಮೊದಲ ಐವತ್ತು ಜನ ಕೋಟ್ಯಧಿಪತಿಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ನಲ್ವತ್ತೆಂಟು ಮಂದಿ ಕೇರಳದವರು ಎಂದರೆ ಇವರೆಲ್ಲರೂ ಕೊಡಗನ್ನು ಯಾವ ಪರಿಯಲ್ಲಿ ಲೂಟಿ ಮಾಡಿರಬಹುದು? ಕೊಡಗನ್ನು ಅಕ್ಷಯಪಾತ್ರೆ ಮಾಡಿಕೊಂಡ ಕೇರಳ ಮಾಪಿಳ್ಳೆಗಳ ದುರಾಸೆ ಇಷ್ಟಕ್ಕೇ ನಿಲ್ಲಲಿಲ್ಲ. ರಾಜಕೀಯ ಹಕ್ಕನ್ನು ಗಳಿಸಲು ಕೊಡಗಿನಲ್ಲಿ ಮಾಡಿದ ಪ್ರಯತ್ನಗಳೂ ಅನೇಕ. ಎಸ್‌ಡಿಪಿಐ ಎಂಬ ಪಕ್ಷ ಕರ್ನಾಟಕಕ್ಕೆ ಮೊದಲ ಹೆಜ್ಜೆಯನ್ನಿಟ್ಟಿದ್ದೇ ಕೊಡಗಿನ ಮೂಲಕ. ಏಕೆಂದರೆ ಅದಕ್ಕೂ ಮೊದಲೇ ಪಿಎಐನ ಹೆಜ್ಜೆಗುರುತುಗಳು ಕೊಡಗಿನಲ್ಲಿ ಮೂಡಿದ್ದವು. ರಾಜಕೀಯ ಮತ್ತು ಮತಾಂಧತೆಯ ಎಲ್ಲಾ ಅಪಸವ್ಯಗಳಿಗೂ ಕೊಡಗು ಪ್ರಯೋಗಶಾಲೆಯಾಯಿತು. ಕಾವೇರಿಯ ತವರುಮನೆ, ಅಗಸ್ತ್ಯನ ತಪದ ಮನೆ ಎನ್ನುವುದು ಹಾಡಾಗುಳಿಯಿತು.

ಈಗ ಎಲ್ಲಾ ಮುಗಿದ ಮೇಲೆ ಗಡಿಯಲ್ಲಿ ಅಗತ್ಯ ಬಂದೋಬಸ್ತು ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಊರು ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲೇಕೆ ಹಾಕಬೇಕೋ ತಿಳಿಯದು. ದಟ್ಟಾರಣ್ಯದಲ್ಲಿ ಹಾಕುವ ಸಿಸಿ ಕ್ಯಾಮರಾಗಳು ಕೊಡಗಿನ ಗತವೈಭವವನ್ನು ಮರಳಿ ತರುತ್ತವೆಯೇ? ಕುಟ್ಟಪ್ಪನ ಆತ್ಮಕ್ಕೆ ಶಾಂತಿಯನ್ನು ತರುತ್ತವೆಯೇ?

Leave a comment