ಅತಿ ಭೀಕರ ಪದ ಈ “ಇಂತಿಫದಾ”!

೧೯೮೭-ಡಿಸೆಂಬರ್ ೯. ಜಬಾಲಿಯಾ ರೆಫ್ಯೂಜಿ ಕ್ಯಾಂಪ್.
ಯಹೂದಿ ಡ್ರೈವರನೊಬ್ಬ ಚಲಾಯಿಸುತ್ತಿದ್ದ ಟ್ರಕ್ ಕಾರಿಗೆ ಡಿಕ್ಕಿಹೊಡೆಯಿತು. ಅಪಘಾತದಲ್ಲಿ ಒರ್ವ ಯಹೂದಿಯೂ ಸೇರಿದಂತೆ ಮೂವರು ಪ್ಯಾಲೆಸ್ಟೀನಿಯನ್ನರು ಸತ್ತರು. ಸತ್ತವರಲ್ಲೊಬ್ಬ ಯಹೂದಿ ಇದ್ದರೂ ಪ್ಯಾಲೆಸ್ಟೀನಿಯರ ಕೋಪ ಸಮಸ್ತ ಯಹೂದಿಗಳ ಮೇಲೆ ತಿರುಗಿತು. ಕಂಡಕಂಡಲ್ಲಿ ಯಹೂದಿಯರನ್ನು ಕೊಲ್ಲಲಾಯಿತು. ಗಲಭೆ ತೀವ್ರವಾಗಿ ಇಡೀ ಗಾಜಾಕ್ಕೆ ವ್ಯಾಪಿಸಿತು. ಅಡಗಿಸಲು ಬಂದ ಇಸ್ರೇಲಿ ಪಡೆಗಳ ಮೇಲೆ ಕಲ್ಲು ತೂರಲಾಯಿತು. ಅದನ್ನೇ ಕಾಯುತ್ತಿದ್ದ ಮುಸ್ಲಿಂ ದೇಶಗಳು ಸಾಮೂಹಿಕವಾಗಿ ಇಸ್ರೇಲಿಗೆ ಛೀಮಾರಿ ಹಾಕಿದವು. ಆರು ವರ್ಷಗಳ ಕಾಲ ನಡೆದ ಈ ಗಲಭೆ ೧೯೯೩ರಲ್ಲಿ ತಹಬದಿಗೆ ಬಂತು.
ಇವೆಲ್ಲವೂ ನಡೆದಿದ್ದು ಒಂದು ರೆಫ್ಯೂಜಿ ಕ್ಯಾಂಪಿನಲ್ಲಿ. ಇಸ್ರೇಲ್ ಸ್ಥಾಪನೆಯಾದಾಗ ಅರಬ್ ಒಕ್ಕೂಟಗಳು ಇದರಿಂದ ಪ್ಯಾಲೆಸ್ಟೀನಿಯನ್ನರು ನಿರಾಶ್ರಿತರಾಗುತ್ತಾರೆ ಎಂದು ಊಳಿಟ್ಟಿದ್ದವು. ಆದರೆ ಇಸ್ರೇಲ್ ಪ್ಯಾಲೆಸ್ಟೀನಿಯರಿಗೂ ನೆಲೆ ಕೊಟ್ಟಿತ್ತು. ಅರಬ್ ಒಕ್ಕೂಟಗಳು ರಂಗೋಲಿ ಕೆಳಗೆ ತೂರುವ ತಂತ್ರ ಹೆಣೆದು ಕೃತಕವಾಗಿ ವಲಸಿಗರ ಹಿಂಡನ್ನು ಸೃಷ್ಟಿಸಿ ಇವರಿಗೆಲ್ಲಾ ಯಾರಿನ್ನು ದಿಕ್ಕು ಎಂದು ಆಲಾಪಿಸಿತು. ವಿಶ್ವದ ಎಲ್ಲಾ ದೇಶಗಳ ಕೆರೆಗಳ ನೀರು ಕುಡಿದಿದ್ದ ಯಹೂದಿಗಳು ಅದಕ್ಕೆ ಕ್ಯಾರೇ ಅನ್ನದಿದ್ದರೂ ವಿಶ್ವಸಂಸ್ಥೆ ಈ ನಕಲಿ ನಿರಾಶ್ರಿತರಿಗೆ ವ್ಯವಸ್ಥೆಯನ್ನು ಮಾಡಲೇಬೇಕಿತ್ತು. ಆದ್ದರಿಂದ ಗಾಜಾ ಪಟ್ಟಿಯ ಉತ್ತರಕ್ಕಿದ್ದ ಜಬಾಲಿಯಾ ಎಂಬಲ್ಲಿ ರೆಫ್ಯೂಜಿ ಕ್ಯಾಂಪನ್ನು ನಿರ್ಮಾಣ ಮಾಡಿತು. ಕ್ಯಾಂಪಿನಲ್ಲಿ ನಕಲಿ ನಿರಾಶ್ರಿತರು ದಿನವೊಂದಕ್ಕೆ ಕಾಯುತ್ತಲೇ ಇದ್ದರು. ಆಗ ನಡೆದಿದ್ದೇ ಈ ಅಪಘಾತ ಪ್ರಕರಣ ಮತ್ತು ಗಲಭೆ.
ತನ್ನದಲ್ಲದ ತಪ್ಪಿಗೆ ಇಸ್ರೇಲ್ ತನ್ನ ಶಕ್ತಿ ಮತ್ತು ಸಂಪತ್ತನ್ನು ಗಲಭೆ ಅಡಗಿಸಲು ಬಳಸಬೇಕಾಯಿತು. ಲೋಕನಿಂದನೆಯನ್ನೂ ಕೇಳಬೇಕಾಯಿತು. ಈ ಗಲಭೆಯಿಂದ ಪ್ಯಾಲೆಸ್ಟೀನ್ ಗಳಿಸಿಕೊಂಡಿದ್ದೇನೂ ಇಲ್ಲದಿದ್ದರೂ ಇಸ್ರೇಲಿನ ಬೆಳವಣಿಗೆಯ ವೇಗವನ್ನು ಕೊಂಚ ತಗ್ಗಿಸಿ ವಿಚಿತ್ರ ಅನಂದವನ್ನು ಅನುಭವಿಸಿತು. ಇಸ್ರೇಲ್ ಬಗೆ ತನ್ನೊಡಲಲ್ಲಿ ಎಂದೂ ಆರದ ಕಿಡಿಯೊಂದಿದೆ, ಆ ಕಿಡಿ ಯಾವ ಕ್ಷಣದಲ್ಲಾದರೂ ಜ್ವಾಲೆಯಾಗಿ ಉರಿಯಬಹುದು ಎಂಬುದನ್ನು ಇಸ್ಲಾಂ ಜಗತ್ತಿನೆದುರು ಬಿಂಬಿಸುವಲ್ಲಿ ಪ್ಯಾಲೆಸ್ಟೀನ್ ಯಶಸ್ವಿಯಾಗಿತ್ತು. ೧೯೮೭ರ ಕಲ್ಲುತೂರಾಟದ ಘಟನೆಗೆ ಪ್ಯಾಲೆಸ್ಟೀನ್ ಎಷ್ಟೊಂದು ಮಹತ್ತ್ವ ಕೊಟ್ಟಿತ್ತೆಂದರೆ ಅದನ್ನು ತನ್ನ ದೇಶದ ಪ್ರಮುಖ ಘಟನೆಗಳಲ್ಲೊಂದು, ಸ್ವಾಭಿಮಾನದ ಪ್ರತೀಕ, ಇಸ್ಲಾಮಿಗಾಗಿ ನಡೆದ ಚಳವಳಿ ಎಂದು ಹೇಳಿಕೊಂಡಿತು. ಪಾನ್ ಇಸ್ಲಾಂ ಹೋರಾಟಕ್ಕೂ ಜಬಾಲಿಯಾ ನಿರಾಶ್ರಿತ ಕ್ಯಾಂಪಿನ ಘಟನೆ ವೇಗ ನೀಡಿತು. ಪ್ಯಾಲೆಸ್ಟೀನ್ ಆ ಹೋರಾಟಕ್ಕೆ ಕೊಟ್ಟುಕೊಂಡ ಹೆಸರು “ಇಂತಿಫದಾ’!
ಅರಬಿಕ್‌ನಲ್ಲಿ “ಇಂತಿಫದಾ’ಕ್ಕೆ ’ಕ್ರಾಂತಿಯ ಸಿಡಿಯುವಿಕೆ’, ’ಪುನರುತ್ಥಾನದ ಕ್ರಾಂತಿ’, ’ಅಲ್ಲಾಡಿಸುವುದು’, ’ನಡುಗಿಸುವುದು’, ’ತೊಡೆದುಹಾಕುವುದು’ ಮುಂತಾದ ಅರ್ಥಗಳಿವೆ. ಈ ಅರ್ಥಕ್ಕೆ ತಕ್ಕಂತೆಯೇ ರೆಫ್ಯೂಜಿ ಕ್ಯಾಂಪಿನ ಗಲಭೆಯನ್ನು ಪ್ಯಾಲೆಸ್ಟೀನ್ ಸಂಘಟಿಸಿತ್ತು. ನೇರ ದಾಳಿಯಿಂದ ಮುರಿಯುವುದು ನಮ್ಮ ಸೊಂಟವೇ ಹೊರತು ಇಸ್ರೇಲಿನ ಕೂದಲೂ ಅದರಿಂದ ಕೊಂಕದು ಎಂಬುದು ಅದಕ್ಕೆ ೬೭ರ ಯುದ್ಧದಲ್ಲೇ ಅರ್ಥವಾಗಿಹೋಗಿತ್ತು. ಅಲ್ಲದೆ ಪ್ಯಾಲೆಸ್ಟೀನನ್ನು ಮುಂದಿಟ್ಟುಕೊಂಡು ಪಾನ್ ಇಸ್ಲಾಮಿನ ಉದ್ದೇಶವನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದೆಂಬ ಯೋಚನೆಯಲ್ಲಿದ್ದಾಗಲೇ ಸಿಕ್ಕಿದ್ದು ಈ ಇಂತಿಫದಾ. ಅದೆಷ್ಟು ಫ್ಲೆಕ್ಸಿಬಲ್ ಆಗಿತ್ತೆಂದರೆ ಅದನ್ನು ಸುಲಭವಾಗಿ ಸಹಜ ಕ್ರಾಂತಿಯೆಂಬಂತೆ ಬಳಸಬಹುದಿತ್ತು, ಸಾಮಾನ್ಯ ನಾಗರಿಕನನ್ನೂ ಅದರಲ್ಲಿ ತೊಡಗಿಸಿಕೊಳ್ಳಬಹುದಿತ್ತು. ವಿಶ್ವದ ಎಲ್ಲೆಲ್ಲಿ ಮದರಸಗಳ ಪ್ರಭಾವವಿದೆಯೋ ಅಲ್ಲೆಲ್ಲಾ ಮುಸಲ್ಮಾನರ ಹ್ರದಯವನ್ನು ಮೀಟಬಹುದಿತ್ತು. ಸುಲಭವಾಗಿ ಅದಕ್ಕೆ ಕಾರ್ಪೊರೇಟ್ ರೂಪವನ್ನೂ ಕೊಡಬಹುದಿತ್ತು. ಏಕೆಂದರೆ ಕಮ್ಯುನಿಸ್ಟರು ಇಂತಿಫದಾಕ್ಕೆ ಅದಾಗಲೇ ಜೀವ ತುಂಬಿ ರೆವಲ್ಯೂಶನ್‌ನ ಸ್ವರೂಪ ಕೊಟ್ಟುಬಿಟ್ಟಿದ್ದರು.
ಈ ಮನೆಹಾಳ ಕಮ್ಯುನಿಸ್ಟರು ೧೯೫೨ರಲ್ಲಿ ಜೋರ್ಡಾನಿನ ಹಾಸ್ಮೆಟ್ ಸಾಮ್ರಾಜ್ಯದ ವಿರುದ್ಧ ಜನರನ್ನು ಎತ್ತಿಕಟ್ಟುವ ಗಲಭೆಗೂ ಇಂತಿಫದಾ ಹೆಸರಿಟ್ಟಿದ್ದರು. ಇರಾಕ್, ಜೋರ್ಡಾನ್ ಮತ್ತು ಈಜಿಪ್ಟಿನವರೆಗೂ ವ್ಯಾಪಿಸಿದ್ದ ಹಾಸ್ಮೆಟ್ ಸಾಮ್ರಾಜ್ಯದ ಬಗೆಗೆ ಇದ್ದ ಜನಾಕ್ರೋಶವನ್ನು ಬಳಸಿಕೊಂಡ ಕಮ್ಯುನಿಸ್ಟರು ಕಲ್ಲು ತೂರಾಟದ ಮೂಲಕ ನಾಗರಿಕ ದಂಗೆಯನ್ನು ಪ್ರಾರಂಭಿಸಿದರು. ಅದು ಯಶಸ್ವಿಯಾಗಿ ಈಜಿಪ್ಶಿಯನ್ ಕ್ರಾಂತಿ ಎಂದು ಕರೆಸಿಕೊಂಡಿತು. ವಿಪರ್ಯಾಸವೆಂದರೆ ಯಾರ ಆಡಳಿತದಲ್ಲಿ ಮತೀಯ ಅಚರಣೆಗಳು ಜನರ ಉಸಿರುಗಟ್ಟಿಸುತ್ತಿತ್ತೋ, ಉದಾರವಾದಿ ನೀತಿಗಳಿದ್ದವೋ ಅವೆಲ್ಲವೂ ಬದಲಾಗಿ ಕಟ್ಟರ್ ಮತಾಂಧ ಸರ್ಕಾರ ಅಸ್ಥಿತ್ವಕ್ಕೆ ಬಂತು. ಈ ಘಟನೆಯನ್ನು ಇಸ್ಲಾಂ ಜಗತ್ತು ಪುನರುತ್ಥಾನ ಎಂದು ಕರೆದುಕೊಂಡಿತ್ತು. ಆದರೆ ವಾಸ್ತವವಾಗಿ ಇದನ್ನು ಆರಂಭಿಸಿದ್ದು ಕಮ್ಯುನಿಸ್ಟರು! ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಗತಿ ಮತ್ತು ಸಮಾನತೆಗಾಗಿ ಕ್ರಾಂತಿ ಅನಿವಾರ್ಯ ಎನ್ನುವ ಕಮ್ಯುನಿಸ್ಟರು ಕ್ರಾಂತಿಯ ಹೆಸರಲ್ಲಿ ಪ್ರತಿಷ್ಠಾಪಿಸಿದ್ದು ಮತೀಯ ಸರ್ಕಾರವನ್ನು! ಆಗ ಯಾವ ಕಮ್ಯುನಿಸ್ಟರಿಗೂ ಅದು ಅಫಿಮು ಎನಿಸಲಿಲ್ಲ. ಹೀಗೆ ಇಂತಿಫದಾ ಕ್ರಾಂತಿಯ ಸ್ವರೂಪ ಪಡೆದು ಮದ್ಯಪ್ರಾಚ್ಯದ ಎಲ್ಲಾ ಚಳುವಳಿಗಳಲ್ಲೂ ಬಿತ್ತನೆ ಬೀಜದಂತೆ ಬಳಕೆಯಾಯಿತು. ಎಲ್ಲೆಲ್ಲಿ ಜಿಹಾದ್ ನಡೆಸಬೇಕೋ ಅಲ್ಲೆಲ್ಲಾ ಜಿಹಾದಿಗೆ ಶಂಕುಸ್ಥಾಪನೆಯನ್ನು ಇಂತಿಫದಾ ಘೋಷಣೆಯ ಮೂಲಕ ಮಾಡುವ ಕ್ರಮ ಆರಂಭವಾಯಿತು. ಇಂತಿದಾದ ರೂಪುರೇಖೆಯ ಆಧಾರದಲ್ಲಿ ಜಿಹಾದ್‌ನ ಸ್ವರೂಪ ಮತ್ತು ಯಶಸ್ಸು ನಿರ್ಣಯವಾಗುತ್ತಿತ್ತು. ಹೀಗೆ ೧೯೭೦ರಲ್ಲಿ ಸ್ಪೇನ್‌ನಲ್ಲಿ ತುರ್ಕರು ಕಲ್ಲು ತೂರಿದ ಘಟನೆಯನ್ನೂ ಕಮ್ಯುನಿಸ್ಟರು ಕ್ರಾಂತಿ ಎಂದು ಕರೆದರು. ಆದರೆ ಇಂತಿಫದಾಕ್ಕೆ ವೇಗವನ್ನು ಕೊಟ್ಟಿದ್ದು ಮಾತ್ರ ೧೯೮೭ರ ಘಟನೆಯೇ. ಅದರ ನಂತರ ಪ್ಯಾಲೆಸ್ಟೀನ್ ಮತ್ತು ಅರಬ್ ಒಕ್ಕೂಟಗಳು ಜಗತ್ತಿನೆದುರು ಸುಲಭವಾಗಿ ಸಂತ್ರಸ್ಥನ ಸೋಗು ಹಾಕಿದವು. ಅದರಿಂದ ಸ್ವತಃ ವಿಶ್ವಸಂಸ್ಥೆ ಮತ್ತು ತಟಸ್ಥ ರಾಷ್ಟ್ರಗಳೇ ಗೊಂದಲಕ್ಕೊಳಗಾದವು. ಹಲವು ದೇಶಗಳಲ್ಲಿ ಇಂತಿದಾ ಹೆಸರಿನ ಕ್ಲಬ್‌ಗಳು, ಪತ್ರಿಕೆಗಳು ಆರಂಭವಾದವು. ಅತ್ಯಂತ ನಾಜೂಕಾಗಿ ಒಂದು ನರೇಶನ್ ಅನ್ನು ಇಸ್ಲಾಂ ಜಗತ್ತು ಕಟ್ಟಲಾರಂಭಿಸಿತು. ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದ್ದ ಕಲ್ಲುತೂರಾಟವನ್ನೂ ಸ್ವಾತಂತ್ರ್ಯ ಹೋರಾಟ ಎನ್ನುತ್ತಿದ್ದುದರ ಹಿಂದಿದ್ದ ಧೋರಣೆ ಕೂಡ ಇದೇ ಇಂತಿಫದಾ ಎಂದರೆ ಅದೆಷ್ಟು ಅಪಾಯಕಾರಿ ಎನ್ನುವುದನ್ನು ತಿಳಿಯಬೇಕು. ಇಸ್ಲಾಂ ಮತಾಂಧತೆ ಮತ್ತು ಕಮ್ಯುನಿಸ್ಟ್ ಚಿಂತನೆಗಳೆಷ್ಟು ನಾಜೂಕಾಗಿ ಕಾರ್ಯಾಚರಿಸುತ್ತದೆಂದರೆ ಪ್ಯಾಲೆಸ್ಟೀನ್ ಬೆಂಬಲಿತ ಹೋರಾಟವನ್ನು ನಾನಾ ಸ್ವರೂಪಗಳ ಮೂಲಕ ವಿಶ್ವದ ಎಲ್ಲಾ ದೇಶಗಳಿಗೆ ಕೊಂಡೊಯ್ಯಿತು. ರಾಷ್ಟ್ರೀಯತೆಯನ್ನು ಅತಿರೇಕ ಎಂದು ಬಿಂಬಿಸಲೂ ಇಂತಿಫದಾ ಎನ್ನಲಾಯಿತು. ಭಾರತದಲ್ಲಿ ಇಸ್ರೇಲ್ ವಿರುದ್ಧ ನಡೆಯುವ ಎಲ್ಲಾ ಹೋರಾಟ, ಪ್ರತಿಭಟನೆಗಳಲ್ಲಿ ಮತಾಂಧ ಮುಸಲ್ಮಾನರೊಟ್ಟಿಗೆ ಕಮ್ಯುನಿಸ್ಟರೇಕೆ ಸೇರಿಕೊಂಡಿರುತ್ತಾರೆ ಎಂಬುದಕ್ಕೆ ಅಸಲಿ ಕಾರಣ ಕೂಡ ಇದೇ ಇಂತಿಫದಾ. ಇಸ್ಲಾಂ ಭಯೋತ್ಪಾದನೆಗಳಿಗೆ ರಾಜಕೀಯ ಮುಸುಕನ್ನು ಹಾಕುವ, ರೆವಲ್ಯೂಲನ್‌ನ ರೂಪವನ್ನು ನೀಡುವ ಬೀಜಮಂತ್ರವಾಗಿ ಇಂತಿಫದಾ ಬಳಕೆಯಾಯಿತು. ನಾಲ್ಕು ವರ್ಷಗಳ ಹಿಂದೆ ಸಿಎಎ ವಿರುದ್ಧದ ಚಳವಳಿಗಳನ್ನು ಹೇಗೆ ಮತೀಯ ಸ್ವರೂಪಕ್ಕೆ ಬದಲಾಯಿಸಲಾಯಿತು ಎಂಬುದು ನಮಗೆ ತಿಳಿದಿದ್ದರೆ ಇದರ ಅಪಾಯವನ್ನು ಸುಲಭವಾಗಿ ತಿಳಿಯಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ಅನ್ನು ಕಿತ್ತೊಗೆದಾಗ ಅರಚಿದ ಧ್ವನಿ ಕೂಡ ಇದೇ ಇಂತಿಫದಾದ್ದು. ರೈತ ಮಸೂದೆಗಳನ್ನು ವಿರೋಧಿಸಿ ನಡೆದ ಹೋರಾಟಗಳಲ್ಲಿ ಪಾಕಿಸ್ಥಾನ ಪರ ಘೋಷಣೆಗಳು ಕೇಳಿಬಂದಿದ್ದು ಕೂಡ ಅದೇ ೮೦ರ ದಶಕದಲ್ಲಿ ಪ್ಯಾಲೆಸ್ಟೀನ್‌ನಲ್ಲಿ ನಡೆದ ಇಂತಿಫದಾದ ಪ್ರೇರಣೆಯಿಂದಲೇ. ದೇಶದ ಎಲ್ಲೆಲ್ಲಿ ಮತೀಯ ಸಂಗತಿಗಳಿಗೆ ಕ್ರಾಂತಿಯ ರೂಪವನ್ನು ಕೊಡಲಾಗುತ್ತದೋ ಅವೆಲ್ಲದರ ಹಿಂದಿರುವುದು ಈ ಮತಾಂಧ ಮತ್ತು ಕಮ್ಯುನಿಸ್ಟ್ ಸಮ್ಮಿಳನದ ಕ್ರಾಸ್‌ಬೀಡ್ ಚಿಂತನೆಗಳೇ. ಅದಕ್ಕೆ ವೋಕಿಸಂ ಅನ್ನಿ, ತುಕ್ಡೇ ಗ್ಯಾಂಗಿನ ಅರಚಾಟವೆನ್ನಿ ಅಥವಾ ಡೋಂಗಿ ಸೆಕ್ಯುಲರಿಸಮ್ಮಿನ ಹುಚ್ಚಾಟವೆಂದೇ ಅನ್ನಿ. ಆದರೆ ಅದರೊಳಗಿನ ಮದ್ಯಸಾರ ಮಾತ್ರ ಇಂತಿಫದಾದ್ದೆ! ಎನ್‌ಅರ್‌ಸಿ ವಿರುದ್ಧ ಗಲಾಟೆ ಎಬ್ಬಿಸಿದ ಜೆಎನ್‌ಯುನ ಪೋಲಿಗಳಂತೂ “ನೀಲ್ ಸಲಾಂ… ವಹ್ ಸಲಾಂ… ಇಂತಿದಾ ಇನ್ಕಿಲಾಬ್‘ ಘೋಷಣೆಯನ್ನೇ ಹುಟ್ಟುಹಾಕಿ ಆರ್ಭಟಿಸಿದ್ದರು.
ಇದೀಗ ಇಂತಿಫದಾದ ಪ್ರೊಮೋಶನ್ ಹೊಣೆಯನ್ನು ಕೇರಳ ಹೊತ್ತುಕೊಂಡಿದೆ. ಅಷ್ಟಕ್ಕೂ ಮತಾಂಧತೆ ಮತ್ತು ಕಮ್ಯುನಿಸಮ್ಮನ್ನು ಬೆರೆಸಿ ಮಾಡುವ ಅಡಿಗೆಗೆ ಕೇರಳವೇ ಸೂಕ್ತವಾದ ಅಡಿಗೆಮನೆ. ಅದಕ್ಕೆ ಈ ಬೆರಕೆಗಳು ಆರಿಸಿಕೊಂಡಿದ್ದು ತಿರುವನಂತಪುರದ ಕೇರಳ ವಿಶ್ವವಿದ್ಯಾಲಯವನ್ನು. ರಾಜ್ಯಪಾಲರೇ ಕುಲಪತಿಗಳಾಗಿರುವ ವಿಶ್ವವಿದ್ಯಾಲಯದಲ್ಲಿ ಕೀಳು ರಾಜಕೀಯ ಮಾಡಲು ಈ ಬೆರಕೆಗಳು ಆರಿಸಿಕೊಂಡಿದ್ದು ಇಂತಿಫದಾ. ಅಂದರೆ ರಸ್ತೆಯಲ್ಲಿ ಕಲ್ಲುತೂರಲು, ಪ್ರತ್ಯೇಕತಾವಾದಕ್ಕೆ ಇಂಬು ನೀಡಲು ಮತ್ತು ವಿಶ್ವವಿದ್ಯಾಲಯದಂಥ ಘನತೆವೆತ್ತ ಜಾಗಕ್ಕೂ ಒಗ್ಗುವ ಫ್ಲೆಕ್ಸಿಬಲ್ ಆದ ಗುಣ ಈ ಇಂತಿಫದಾಕ್ಕಿದೆ! ಕೇರಳ ವಿಶ್ವವಿದ್ಯಾಲಯದಲ್ಲಿ ಮೊದಲಿನಿಂದಲೂ ಕಮ್ಯುನಿಸ್ಟ್ ಪ್ರೇರಿತ ಎಸ್‌ಎಐನ ಪ್ರಾಬಲ್ಯವಿದೆ. ನೇರ ಸರ್ಕಾರದೊಳಗೆ ಕೈಯಾಡಿಸುವಷ್ಟು ತಾಕತ್ತು ಇವರಿಗಿದೆ. ಈ ವರ್ಷದ ವಿಶ್ವವಿದ್ಯಾಲಯದ ಯುವಜನೋತ್ಸವಕ್ಕೆ ಎಸ್‌ಎಐ ಇಟ್ಟ ಹೆಸರು ಇಂತಿಫದಾ! ಜೊತೆಗೆ ಸಾಂಸ್ಕೃತಿಕ ಉತ್ಸವದ ಲಾಂಛನದಲ್ಲಿ ಪ್ಯಾಲೆಸ್ಟೀನ್ ಧ್ವಜವನ್ನು ತುರುಕಲಾಗಿತ್ತು. ಒಂದು ವಿಶ್ವವಿದ್ಯಾಲಯವೇ ಹೀಗೆ ಮತೀಯ ಧೋರಣೆಯಿಂದ ಪರರಾಷ್ಟ್ರದ ನಿಲುವನ್ನು ಬೆಂಬಲಿಸುವುದಾದರೆ ೩೦ರ ದಶಕದ ಆಲಿಗಢ ವಿಶ್ವವಿದ್ಯಾಲಯಕ್ಕೂ, ಕೇರಳ ವಿಶ್ವವಿದ್ಯಾಲಯಕ್ಕೂ ಏನು ವ್ಯತ್ಯಾಸ? ಸೈಯದ್ ಅಹಮದ್ ಖಾನನಿಗೂ ಇಂದಿನ ಎಸ್‌ಎಐನ ಧೋರಣೆಗೂ ಏನು ವ್ಯತ್ಯಾಸ? ಕೇರಳ ರಾಜ್ಯಪಾಲ ಅರಿಫ್ ಮಹಮದ್ ಖಾನರಿಗೆ ಕೊಡಬಾರದ ಕೀಟಲೆಗಳೆಲ್ಲವನ್ನೂ ಕೊಟ್ಟ ಕೇರಳ ಸರ್ಕಾರ ಈಗ ಇಂತಿಫದಾ ಮೂಲಕ ಅವರನ್ನು ಕೆಣಕಲು ಹೊರಟಿದೆ. ಅದಕ್ಕೆ ಎಲ್‌ಡಿಎ ಸರ್ಕಾರ ಬಳಸಿಕೊಂಡಿದ್ದು ವಿದ್ಯಾರ್ಥಿಗಳನ್ನು! ರಾಜ್ಯಪಾಲರ ಭಾಷಣ ಸರಿ ಇಲ್ಲ, ಅವರು ಆರೆಸ್ಸೆಸ್ ಏಜಂಟ್, ಕೋಮುವಾದಿ, ವಿಶ್ವವಿದ್ಯಾಲಯಕ್ಕೆ ಕಾಲಿಡಕೂಡದು ಮುಂತಾದ ನೂರಾರು ನಿಂದೆ-ಧಿಗ್ಭಂಧನಗಳನ್ನು ಹೇರಿದ್ದ ಪಿಣರಾಯಿ ಸರ್ಕಾರ ಈಗ ಇಂತಿಫದಾವನ್ನು ಬಳಸಿಕೊಂಡಿದೆ. ಇಂತಿಫದಾ ಹೆಸರಿಡುವ ಮೂಲಕ ಕೇರಳದಲ್ಲಿ ಮತ್ತೊಮ್ಮೆ ಮಾಪ್ಲಾ ಕಾಂಡ ನಡೆಸಬೇಕೆಂಬ ಹುನ್ನಾರ ಎಸ್‌ಎಐಗಿದೆಯೇ? ಹಾಗಾದರೆ ರಾಜ್ಯಪಾಲರ ಮೇಲಿನ ದ್ವೇಷಕ್ಕೆ ವಿಶ್ವವಿದ್ಯಾಲಯವನ್ನೇ ಬಲಿಕೊಡುವ ದುರ್ಬುದ್ಧಿಯ ಜನರಿಗೆ ಸಮಾಜದ ಹಿತಾಸಕ್ತಿ ಇನ್ನೆಷ್ಟಿರಬಹುದು? ಕೇರಳ ಸಾಕ್ಷರರ ರಾಜ್ಯವೇ ಆಗಿರಬಹುದು, ಆದರೆ ಸಂವೇದನೆಯ ವಿಷಯದಲ್ಲಿ ಮಾತ್ರ ಕೇರಳವಿನ್ನೂ ಹುಚ್ಚರ ಸಂತೆಯೇ ಹೌದು ಎನ್ನಲು ಈ ಪ್ರಕರಣವೊಂದೇ ಸಾಕು.
ಎಲ್ಲೋ ಐಸಿಸ್ ಉಗ್ರರ ಜಾಡು ಹಿಡಿದ ತನಿಖಾ ಸಂಸ್ಥೆಗಳು ನೇರವಾಗಿ ಕೇರಳಕ್ಕೆ ಧಾವಿಸುತ್ತವೆ. ಕೇರಳದ ಲವ್ ಜಿಹಾದಿನ ಬೇರುಗಳು ಸಿರಿಯಾದವರೆಗೂ ವ್ಯಾಪಿಸಿವೆ. ಹಿಂದು ಮತ್ತು ಕ್ರೈಸ್ತ ಮುಖಂಡರುಗಳು ಇಸ್ಲಾಮಿಗೆ ಮತಾಂತರವಾಗುವ ಹೆಣ್ಣುಮಕ್ಕಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ನ್ಯಾಯಾಲಯ ಕೂಡ ಅದನ್ನು ಗಂಭೀರ ಎಂದು ಪರಿಗಣಿಸುತ್ತದೆ. ಮಲ್ಲಪ್ಪುರಂ ಮುಸಲ್ಮಾನ ಬಾಹುಳ್ಯದ ಜಿಲ್ಲೆಯಾಗಿದೆ. ಇನ್ನೂ ಅನೇಕ ಜಿಲ್ಲೆಗಳು ಮಲ್ಲಪ್ಪುರಂ ಹಾದಿಯಲ್ಲಿವೆ. ಇರುಳಿನಲ್ಲಿ ಕೇರಳದ ಬಂದರುಗಳು ನಿಗೂಢ ಎನಿಸುತ್ತವೆ. ಕಮ್ಯುನಿಸ್ಟರಂತೂ ಕೇರಳವನ್ನು ದೀವಾಳಿ ಮಾಡಿದ್ದಾರೆ. ಕಮ್ಯುನಿಸ್ಟ್ ಮೆನಿಫೆಸ್ಟೋ ಎಂದರೆ ಗೂಂಡಾಗಿರಿ ಒಂದೇ ಎನ್ನುವಂತೆ ಪಾರ್ಟಿ ಆಫೀಸುಗಳು ಭಯಾನಕ ಅಡ್ಡೆಗಳಾಗಿವೆ. ಪ್ರಶ್ನಿಸುವುದನ್ನಂತೂ ಕಮ್ಯುನಿಸ್ಟರು ಯಾವತ್ತೋ ನಿಷೇಧಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾಳೆಯ ಭರವಸೆ ಎನ್ನುವಂತಿರುವ ವಿಶ್ವವಿದ್ಯಾಲಯದಲ್ಲೇ “ಇಂತಿಫದಾ ಇನ್ಕಿಲಾಬ್’ ಎಂದರೆ ಮುಂದೆ ಕೇರಳ ಏನಾಗಬಹುದು? ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎ ಮತ್ತು ಕಮ್ಯುನಿಸ್ಟರ ಎಲ್‌ಡಿಎಫ್ ರಾಜಕೀಯವಾಗಿ ಸದಾ ಕಿತ್ತಾಡುತ್ತಿರುತ್ತವೆ. ಆದರೆ ಹಿಂದು ವಿರೋಧ ಎಂದಾಗ ಒಂದಾಗಿ ಮುಗಿಬೀಳುತ್ತಾರೆ. ವಿಶ್ವವಿದ್ಯಾಲಯದ ಇಂತಿಫದಾ ಪ್ರಕರಣದಲ್ಲಿ ಕೂಡ ಕಮ್ಯುನಿಸ್ಟರು ಅದನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು. ಎಬಿವಿಪಿ ಕಾರ್ಯಕರ್ತರು ಉತ್ಸವಕ್ಕೆ ಇಂತಿಫದಾ ಹೆಸರಿಡಬಾರದೆಂದು ಕೋರ್ಟು ಮೆಟ್ಟಿಲೇರಿದಾಗ ಕಮ್ಯುನಿಸ್ಟರು, ‘ಇದು ಮಾನವನ ಸಹಜ ಸ್ವಭಾವವಾದ ಬಂಡಾಯ ಪ್ರವೃತ್ತಿಯನ್ನು ಹತ್ತಿಕ್ಕುವ ಪ್ರಯತ್ನ‘ ಎಂದು ಹೇಳಿಕೆ ನೀಡಿತ್ತು! ಬಂಡಾಯವೇನೋ ಮಾನವಸಹಜ ಪ್ರವೃತ್ತಿಯಿರಬಹುದು. ಆದರೆ ಬಂಡಾಯಕ್ಕೆ ಪ್ಯಾಲೆಸ್ಟೀನ್ ಸಮರ್ಥನೆಯೇ ಯಾಕೆ? ಬಂಡಾಯಕ್ಕೆ ಮತೀಯ ಕಲರ್ ಅನ್ನೇ ಯಾಕೆ ಮೆತ್ತಬೇಕು? ಅಂತಿಮವಾಗಿ ಕೇರಳ ಹೈಕೋರ್ಟು ಕಾಲೇಜು ಉತ್ಸವಕ್ಕೆ ಇಂತಿಫದಾ ಹೆಸರಿಡಬಾರದೆಂದು ಸೂಚಿಸಿದೆ. ಈಗ ಬೇರೆ ಹೆಸರಿಂದೇನೋ ಉತ್ಸವ ನಡೆಯುತ್ತಿದೆ. ಆದರೆ ಇಂತಿಫದಾ ಮಾನಸಿಕತೆ…?

Leave a comment