ಭಾರತ್ ಮಾತಾ ಕೀ ಜೈ: ಮೊದಲು ಮೊಳಗಿಸಿದವರು ಅಝಿಮುಲ್ಲಾ?

ಪಿಣರಾಯಿಯೇ ಆಗಲಿ, ಅಚ್ಯುತಾನಂದನೇ ಆಗಿರಲಿ ಮಲಪ್ಪುರಂಗೆ ಕಾಲಿಟ್ಟ ತಕ್ಷಣ ದೆವ್ವ ಹಿಡಿದವರಂತೆ ಭಾಷಣ ಮಾಡಲಾಂಭಿಸುತ್ತಾರೆ. ಕಣ್ಣೂರು, ಕೋಯಿಕ್ಕೋಡು, ತ್ರಿಶೂರುಗಳಲ್ಲಿ ನಾಜೂಕಿನಿಂದ ಭಾಷಣ ಮಾಡುವ ಇವರು ಮಲಪ್ಪುರಂ ರ‍್ಯಾಲಿಯಲ್ಲಿ ಮಾತ್ರ ಬೆಂಕಿಯುಗುಳುತ್ತಾರೆ. ಇನ್ನೊಂದು ವಿಚಿತ್ರವೆಂದರೆ ಮಲಪ್ಪುರಂ ಜಿಲ್ಲೆಯಲ್ಲಿ ಎಲ್‌ಡಿಎ ಮತ್ತು ಯುಡಿಎಗಳೆರಡೂ ಪದೇಪದೇ ರ‍್ಯಾಲಿಗಳನ್ನು ಆಯೋಜಿಸುತ್ತಿರುತ್ತವೆ. ಇವೆರಡೂ ಸರ್ಕಾರಗಳು ತಮ್ಮ ಪ್ರಮುಖ ಯೋಜನೆಗಳನ್ನು ಮಲಪ್ಪುರಂನಿಂದಲೇ ಘೋಷಣೆ ಮಾಡುತ್ತವೆ. ಕಾರಣ ಮಲಪ್ಪುರಂ ಮುಸಲ್ಮಾನ ಬಾಹುಳ್ಯದ ಜಿಲ್ಲೆ! ಓಲೈಕೆಯ ಕಾರ್ಖಾನೆ. ಅಲ್ಲಿ ಘೋಷಣೆಯಾಗುವ ಎಲ್ಲಾ ಯೋಜನೆ/ಕಾರ್ಯಕ್ರಮಗಳು ಓಲೈಕೆಯ ಯೋಜನೆಗಳೇ ಆಗಿರುತ್ತವೆ. ಹಾಗಾಗಿ ಪಿಣರಾಯಿಗೂ ಕೂಡ ಮಲಪ್ಪುರಂ ಎಂದರೆ ವಿಶೇಷ ಪ್ರೀತಿ. ಸರ್ಕಾರಿ ಕಾರ್ಯಕ್ರಮಗಳಿಗೆ ಪಿಣರಾಯಿ ಬಂದರೆಂದರೆ ಮಲಪ್ಪುರಂನ ಎಲ್ಲಾ ೧೬ ಶಾಸಕರೂ ಹಾಜರಿರುತ್ತಾರೆ. ಆ ೧೬ರಲ್ಲಿ ೧೪ ಶಾಸಕರು ವಿವಿಧ ಪಕ್ಷಗಳಿಂದ ಆರಿಸಿಬಂದವರಾದರೂ ಅವರೆಲ್ಲರೂ ಮುಸಲ್ಮಾನರು! ಉಳಿದಿಬ್ಬರು ಶಾಸಕರು ಹಿಂದುಗಳಾಗಿದ್ದರೂ ಅವರೂ ಕಮ್ಯುನಿಸ್ಟರಾಗಿರುವುದರಿಂದ ಅವರಿಗೇನೂ ಅಲ್ಲಿ ಮುಜುಗರ ಅನುಭವಿಸುವ ಸಂದರ್ಭ ಬಾರದು. ಬೆಂಕಿ ಭಾಷಣ ಮಾಡುವ ಪಿಣರಾಯಿಗೂ ಇದರಿಂದ ಮತ್ತಷ್ಟು ಉಮೇದು ಬರುತ್ತದೆ. ಪ್ರತಿ ಬಾರಿ ಪಿಣರಾಯಿ ಮಲಪ್ಪುರಂನಿಂದ ಮಾಡುವ ಭಾಷಣದ ತೀವ್ರತೆ ಎಷ್ಟಿರುತ್ತದೆಂದರೆ ಅದು ರಾಷ್ಟ್ರವ್ಯಾಪಿ ಚರ್ಚೆಯಾಗುತ್ತದೆ. ಅದು ಎಡಚರ, ಬುದ್ದಿಜವಿಗಳ ಮಂತ್ರಘೋಷವಾಗುತ್ತದೆ. ಸುಳ್ಳನ್ನು ನಾಜೂಕಾಗಿ ತಿರುಚಿ, ಅದರ ಮೇಲ್ಪದರಕ್ಕೆ ನಯವಾಗಿ ತಾತ್ವಿಕತೆಯನ್ನು ಉದುರಿಸಿ, ರುಚಿಗೆ ತಕ್ಕಂತೆ ಐತಿಹಾಸಿಕ ಸಂಗತಿಗಳನ್ನು ಬೆರೆಸಿ, ಕೇಳುವವರಿಗೆ ತರ್ಕಬದ್ಧವೆನಿಸುವಂತೆ ಧ್ವನಿ ಏರಿಸಿ ಮಾತಾಡುವುದರಲ್ಲಿ ಈ ಕಮ್ಯುನಿಸ್ಟರು ಸಿದ್ಧಹಸ್ತರು. ಪಿಣರಾಯಿ ವಿಜಯನ್ ಅವರಿಗೆ ಈ ಗುಣ ಅಚ್ಯುತಾನಂದನ್ ಅವರಿಂದ ಬಂದ ಬಳವಳಿ! ವಿಚಿತ್ರವೆಂದರೆ ಇವರಂತೆ ಸುಳ್ಳು ಹೇಳುವ ಗುಣ ಬಂಗಾಳಿಗಳಂಥ ವಿದ್ವಾಂಸ ಕಮ್ಯುನಿಸ್ಟರಿಗೂ ಕೂಡ ಸಿದ್ಧಿಸಿಲ್ಲ! ಆ ಕಾರಣ ಕೇರಳದ ಸುಳ್ಳಿನ ಕಂಟೇನರ್‌ಗಳಿಗೆ ದೇಶಾದ್ಯಂತ ಉತ್ತಮ ಬೇಡಿಕೆಯಿದೆ.
ಆ ಬೇಡಿಕೆಯನ್ವಯ ಮೊನ್ನೆ ಪಿಣರಾಯಿ ವಿಜಯನ್ ಮಾತಾಡಿದ್ದು ಹೀಗೆ: “ಆರೆಸ್ಸೆಸ್ ನಾಯಕ ಗೋಳವಲಕರ್ ತಮ್ಮ ಪುಸ್ತಕದಲ್ಲಿ ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಸ್ಟರು ದೇಶದ ಆಂತರಿಕ ಶತ್ರುಗಳು ಎಂದು ದ್ವೇಷ ಕಾರಿದ್ದಾರೆ. ಆದರೆ ಭಾರತ್ ಮಾತಾ ಕೀ ಜಯ್ ಮತ್ತು ಜೈ ಹಿಂದ್ ಘೋಷಣೆಗಳನ್ನು ಮೊಟ್ಟಮೊದಲು ಕೂಗಿದವರೇ ಮುಸಲ್ಮಾನರು. ಹಾಗಾದರೆ ಆರೆಸ್ಸೆಸ್ ಈ ಘೋಷಣೆ ಕೂಗುವುದನ್ನು ಈಗಿಂದೀಗಲೇ ನಿಲ್ಲಿಸುವುದೇ?”
ಗೋಳವಲಕರ್ ಅವರು ನಲ್ವತ್ತರ ದಶಕದಲ್ಲಿ ಹಾಗಂದಿದ್ದು ನಿಜವೇ. ಅಷ್ಟಕ್ಕೂ ಆ ಕಾಲದ ಮುಸಲ್ಮಾನ, ಕ್ರಿಶ್ಚಿಯನ್ ಮತ್ತು ಕಮ್ಯುನಿಸ್ಟರ ಆಟಾಟೋಪಗಳಿಗೆ ಗೋಳವಲಕರ್ ಕೊಟ್ಟ ಹೇಳಿಕೆ ತೀರಾ ಮೃದುವಾಗಿತ್ತೆಂದೇ ಹೇಳಬೇಕು. ಅಂದಿನ ಪರಿಸ್ಥಿತಿಗಳಿಗೆ ಯಾರೇ ಆದರೂ ಭಯಂಕರವಾದ ಹೇಳಿಕೆಗಳನ್ನೇ ನೀಡಬೇಕಿತ್ತು. ಅದು ಆ ಕಾಲದ ಪ್ರತಿಕ್ರಿಯೆ. ಒಂದು ವೇಳೆ ಗೋಳವಲಕರ್ ಇಂದಿನ ಪಿಣರಾಯಿ ಆಡಳಿತವನ್ನು ಪ್ರತ್ಯಕ್ಷ ಕಂಡಿದ್ದರೆ ಕೇರಳಕ್ಕೆ ಕಮ್ಯುನಿಸಮ್ಮೇ ಶತ್ರು ಎಂದೇ ಹೇಳುತ್ತಿದ್ದರು. ಆದರೆ ಗೋಳವಲಕರರ ಈ ಹಳೆಯ ಹೇಳಿಕೆಯನ್ನು ಗುರಾಣಿಯಾಗಿ ಬಳಸಿ ಪಿಣರಾಯಿ ಎಂಥಾ ಸುಳ್ಳನ್ನು ಮಂಡಿಸಿದ್ದರೆಂದರೆ ಭಾರತ್ ಮಾತಾ ಕಿ ಜಯ್ ಘೋಷಣೆಯನ್ನು ಶೋಸಿದವರೇ ಮುಸಲ್ಮಾನರು, ಮೊದಲು ಮೊಳಗಿಸಿದವರೂ ಅವರೇ ಎಂದರು. ಪಿಣರಾಯಿಯ ಮಾತಿನ ಮೊದಲಾರ್ಧದಲ್ಲಿ ಭಾಗಶಃ ಸತ್ಯವಿತ್ತು, ಧ್ವನಿಯಲ್ಲಿ ಅಧಿಕೃತತೆಯಿತ್ತು. ಜೊತೆಗೆ ಕಳೆದ ನೂರು ವರ್ಷಗಳಿಂದ ಈ ಮಾರ್ಕ್ಸ್‌ಪುತ್ರರು ಜನರನ್ನು ಮಂಗ ಮಾಡುತ್ತಾ ಬಂದಿದ್ದ ಕುತಂತ್ರ ಅದರಲ್ಲಡಗಿತ್ತು. ಇಂಥ ಕುತಂತ್ರಗಳೇ ದೇಶದ ಇತಿಹಾಸ, ಸಿದ್ಧಾಂತಗಳನ್ನು ತಿದ್ದಿ ಅವೆಲ್ಲಕ್ಕೂ ಒಬ್ಬ ವಾರಸುದಾರರನ್ನು ಹುಟ್ಟುಹಾಕಿದ್ದವು. ಈಗ ಭಾರತ್ ಮಾತಾ ಕಿ ಜಯ್ ಘೋಷಣೆಗೂ ಒಬ್ಬ ವಾರಸುದಾರರನ್ನು ಹುಟ್ಟಿಸಲು ಹೊರಟಿದ್ದಾರೆ.
ಭಾರತವನ್ನು ಮಾತೆ ಎಂದು ಕೈ ಮುಗಿಯುವ ಯಾರೂ ಕೂಡ ಭಾರತ್ ಮಾತಾ ಕೀ ಜಯ್ ಎನ್ನಬಹುದು. ಆರೆಸ್ಸೆಸ್ಸಿನ ಉದ್ದೇಶ ಕೂಡ ಹಾಗೆನ್ನುವವರ ಸಂಖ್ಯೆ ಹೆಚ್ಚಬೇಕು ಎಂಬುದೇ. ಆದರೂ ಜಗತ್ತಿನ ಅತಿ ದೊಡ್ಡ ಸಂಘಟನೆ ಆರೆಸ್ಸೆಸ್ ತನ್ನ ಪ್ರಾರ್ಥನೆಯಲ್ಲಿ ಭಾರತ್ ಮಾತಾ ಕೀ ಜಯ್ ಅನ್ನು ಸೇರ್ಪಡೆಗೊಳಿಸಿದೆ. ಎಲ್ಲೇ ಆಗಲಿ, ಯಾರೇ ಆಗಲಿ ಅದನ್ನು ಮೊಳಗಿಸಬಹುದಾದರೂ ಸಂಘದ ಶಾಖೆಗಳಲ್ಲಿ ಮೊಳಗಿಸಲು ಕೆಲವು ಶಿಷ್ಟಾಚಾರಗಳಿವೆ. ಬಹಳ ಪವಿತ್ರವೆಂಬಂತೆ ಸಂಘದ ಸ್ವಯಂಸೇವಕರಲ್ಲಿ ಆ ಘೋಷಣೆ ಎದೆಯಿಂದ ಹೊರಹೊಮ್ಮುತ್ತದೆ. ಅಂಥ ಭಾರತ್ ಮಾತಾ ಕೀ ಜಯ್ ಮೂಲತಃ ಮುಸಲ್ಮಾನರ ಶೋಧವೇ? ದೇಶವನ್ನೆಂದಿಗೂ ಮಾತೆಯ ದೃಷ್ಟಿಯಲ್ಲಿ ನೋಡದ, ಅರಬ್ ರಾಷ್ಟ್ರವಾದವನ್ನು ಪ್ರೇರಣೆಯಾಗಿ ಸ್ವೀಕರಿಸುವ ಮುಸಲ್ಮಾನರು ಹೀಗಂದರೇ? ಹಾಗಾದರೆ ವಂದೇ ಮಾತರಂಗೇಕೆ ಇವರು ತ್ವಾ ಹೊರಡಿಸುತ್ತಾರೆ? ಮುಸಲ್ಮಾನನೊಬ್ಬ ಅದನ್ನು ಸಂಶೋಧಿಸಿದಿದ್ದರೆ ಇಂದಿನ ಮುಸಲ್ಮಾನರೇಕೆ ಭಾರತ್ ಮಾತಾ ಕೀ ಜಯ್ ಎನ್ನಲು ಹಿಂಜರಿಯುತ್ತಾರೆ? ಹಾಗಾದರೆ ಘೋಷಣೆ ಹುಟ್ಟುಹಾಕಿದ್ದ ಮುಸಲ್ಮಾನ ರಾಷ್ಟ್ರೀಯವಾದಿಯಾಗಿದ್ದನೇ? ಆತ ಆರೆಸ್ಸೆಸ್ ಕಾರ್ಯಕರ್ತನೇನಾದರೂ ಆಗಿದ್ದನೇ? ಇಲ್ಲ, ಆರೆಸ್ಸೆಸ್ ಕಾರ್ಯಕಾರಿಣಿಯಲ್ಲಿ ಇಂಥದ್ದೊಂದು ಘೋಷಣೆಯನ್ನು ನಿರ್ಧರಿಸಲಾಗಿತ್ತೇ?-ಇಂಥ ಪ್ರಶ್ನೆಗಳು ಅನೇಕರಲ್ಲಿ ಮೂಡಬಹುದು. ಇವೆಲ್ಲಕ್ಕೂ ಉತ್ತರವನ್ನು ಪಿಣರಾಯಿಯೇ ಕೊಡಬೇಕು. ಏಕೆಂದರೆ ಪಿಣರಾಯಿ ಪ್ರಕಾರ ಭಾರತ್ ಮಾತಾ ಕೀ ಜಯ್ ಘೋಷಣೆಯನ್ನು ಮೊದಲು ಕೂಗಿದವನು ಅಝಿಮುಲ್ಲಾ ಖಾನ್ ಯೂಸ್ಜಾಯ್ ಎಂಬ ಮುಸಲ್ಮಾನ!
ಹೆಸರು ಒಂಥರಾ ಅಫಘಾನಿಸ್ಥಾನ ಕ್ರಿಕೇಟ್ ತಂಡದ ಹಳೆಯ ಕೋಚ್ ಆಗಿದ್ದನೇನೋ ಎಂಬಂತಿದ್ದರೂ ಈ ಅಝಿಮುಲ್ಲಾ ಖಾನ್ ಯೂಸಫ್ಜಾಯ್ ಒಬ್ಬ ಭಾರತೀಯ ಮುಸಲ್ಮಾನ. ಕಾನ್ಪುರವೆಂಬ ಕಂಟೋನ್ಮೆಂಟಿನಲ್ಲಿ ಹುಟ್ಟಿದ ಕಾರಣಕ್ಕೆ ಆತನಿಗೆ ಇಂಗ್ಲಿಷ್ ಮತ್ತು ಫ್ರೆಂಚ್‌ಗಳೆರಡೂ ನಿರರ್ಗಳವಾಗಿ ಬರುತ್ತಿತ್ತು. ಮಹಾ ಬುದ್ದಿವಂತನಾಗಿದ್ದ ಆತ ತನ್ನ ಭಾಷಾ ಪರಿಣತಿಯಿಂದ ಹಲವು ರಾಜಸಂಸ್ಥಾನಗಳಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ. ನಂತರ ಕಾನ್ಪುರದ ನಾನಾ ಸಾಹೇಬ ಪೇಶ್ವೆಯ ಆಪ್ತಕಾರ್ಯದರ್ಶಿಯಾದ. ಮುಂದೆ ನಾನಾ ಸಾಹೇಬನ ಪ್ರಧಾನಮಂತ್ರಿ ಮತ್ತು ದಿವಾನ ಕೂಡ ಆದ. ನಾನಾ ಸಾಹೇಬನ ಕಾಲದಲ್ಲೇ ಈಸ್ಟ್ ಇಂಡಿಯಾ ಕಂಪನಿ ಕಾನ್ಪುರ ಸಂಸ್ಥಾನವನ್ನು ನಾನಾ ಕಾಯ್ದೆಗಳ ಮೂಲಕ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿತ್ತು. ನೀಡುತ್ತಿದ್ದ ೮೦ ಸಾವಿರ ಪೌಂಡ್‌ಗಳ ವಾರ್ಷಿಕ ಪಿಂಚಣಿಯನ್ನೂ ಕಂಪನಿ ಸರ್ಕಾರ ನಿಲ್ಲಿಸಿಬಿಟ್ಟಿತ್ತು. ಆಗ ಈ ಅಝಿಮುಲ್ಲಾ ಖಾನ್ ನಿರ್ಣಾಯಕ ಪಾತ್ರವನ್ನು ವಹಿಸಿದ. ಕಂಪನಿ ಸರ್ಕಾರದ ವಿರುದ್ಧ ಇಂಗ್ಲೆಂಡಿನಲ್ಲಿ ದಾವೆ ಹೂಡಿದರೆ ಪಿಂಚಣಿಯನ್ನು ಪಡೆಯಬಹುದು ಎಂದ. ಅದುವರೆಗೆ ಯಾವ ಸಂಸ್ಥಾನಗಳೂ ಇಂಗ್ಲೆಂಡಿನಲ್ಲಿ ದಾವೆ ಹೂಡಿ ಗೆದ್ದ ಪ್ರಕರಣಗಳಿರಲಿಲ್ಲ ಮತ್ತು ಬ್ರಿಟಿಷ್ ನ್ಯಾಯಾಲಯದಲ್ಲಿ ಅದು ಯಶಸ್ವಿಯಾಗುವುದೆಂಬ ಯಾವ ಭರವಸೆ ಇರಲಿಲ್ಲ. ಆದರೆ ಪೇಶ್ವೆ ಅಝಿಮುಲ್ಲಾನ ಸಲಹೆಯನ್ನು ಒಪ್ಪಿ ಆತನನ್ನು ಇಂಗ್ಲೆಂಡಿಗೆ ಕಳುಹಿಸಿದ. ಇಂಗ್ಲೆಂಡಿಗೆ ತೆರಳಿದ ಅಝಿಮುಲ್ಲಾ ಅಲ್ಲೇನು ಮಾಡಿದನೋ ತಿಳಿಯದು. ಆದರೆ ಇಂಗ್ಲೆಂಡಿನಿಂದಲೇ ನಾನಾನಿಗೆ ಕೆಲಸ ಆಗಿಲ್ಲ ಎಂದು ಪತ್ರ ಬರೆದ. ಇಂಗ್ಲೆಂಡಿನಿಂದ ಭಾರತಕ್ಕೆ ಮರಳುತ್ತಿದ್ದ ಹೊತ್ತಲ್ಲೇ ಕಾನ್‌ಸ್ಟಾಂಟಿನೋಪಲಿನಲ್ಲಿ ಯುದ್ಧ ಆರಂಭವಾಗಿ ದಾರಿ ಮುಚ್ಚಿತು. ಕೆಲಕಾಲ ಅಲ್ಲಿದ್ದ ಅಝಿಮುಲ್ಲಾನಿಗೆ ಯುದ್ಧ ವರದಿಗಾರಿಕೆಯಲ್ಲಿ ಅದಾಗಲೇ ಖ್ಯಾತನಾಗಿದ್ದ ಪತ್ರಕರ್ತ ವಿಲಿಯಂ ಹೋವಾರ್ಡ್ ರಸ್ಸಲ್‌ನ ಪರಿಚಯವಾಯಿತು. ಅಝಿಮುಲ್ಲಾನ ಕತೆಯೆಲ್ಲವನ್ನೂ ಕೇಳಿದ ರಸ್ಸಲ್‌ನಿಗೆ ಸೋಜಿಗವೆನಿಸಿತು. ಆತ ಅಝಿಮುಲ್ಲಾನಿಗೆ ರಷ್ಯಾ ಮತ್ತು ಟರ್ಕಿಯ ಕೆಲ ಗೂಢಚಾರರನ್ನು ಪರಿಚಯಿಸಿದ. ನಂತರ ನೇರ ಕಾನ್ಪುರಕ್ಕೆ ಬಂದ ಅಝಿಮುಲ್ಲಾ, ನಾನಾನ ಬಳಿ ಬ್ರಿಟಿಷರ ವಿರುದ್ಧ ಕ್ರಾಂತಿಯೊಂದೇ ಪರಿಹಾರ ಎಂದ. ಆ ಹೊತ್ತಿಗೆ ಇಡೀ ದೇಶ ಮಹಾಕ್ರಾಂತಿಯೊಂದಕ್ಕೆ ಕಾಯುತ್ತಿತ್ತು. ಅಝಿಮುಲ್ಲಾನ ಮಾತು ನಾನಾನಿಗೆ ಧೈರ್ಯವನ್ನೂ ತಂದಿತ್ತು. ಮುಂದೆ ನಡೆದಿದ್ದು ಇತಿಹಾಸ. ಸಿಪಾಯಿಗಳಿಂದ ಆರಂಭವಾದ ಕ್ರಾಂತಿ ಕ್ರಮೇಣ ಎಲ್ಲರಲ್ಲೂ ವ್ಯಾಪಿಸಿತು. ಅಷ್ಟೇ ಶೀಘ್ರವಾಗಿ ಕಂಪನಿ ಆಡಳಿತ ಕ್ರಾಂತಿಯನ್ನು ಅಡಗಿಸಿತು. ಕ್ರಾಂತಿಯ ನಂತರ ನಾನಾ ಮತ್ತು ಅಝಿಮುಲ್ಲಾನ ಅಧ್ಯಾಯವೂ ಮುಕ್ತಾಯವಾಯಿತು.
ಇದರ ನಡುವೆ ಈ ಅಝಿಮುಲ್ಲಾ ಭಾರತ್ ಮಾತಾ ಕೀ ಜಯ್ ಎಂದಿದ್ದು ಎಲ್ಲಿ ಎಂಬುದು ಪ್ರಶ್ನೆ! ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊಳಗಿತು ಎನ್ನುವುದಾದರೆ ಅಂಥ ದಾಖಲೆಗಳು ೫೭ರ ಇತಿಹಾಸದಲ್ಲಿಲ್ಲ! ಸಾವರ್ಕರರೇನೋ ೫೭ರ ಕ್ರಾಂತಿಯನ್ನು ಉತ್ತರ-ದಕ್ಷಿಣ, ಹಿಂದು-ಮುಸ್ಲಿಂ ಭೇದವಿಲ್ಲದೆ ಎಲ್ಲರೂ ಏಕರಾಷ್ಟ್ರವಾಗಿ ಒಗ್ಗೂಡಿ ಹೋರಾಡಿದ್ದರು ಎಂದು ಉಲ್ಲೇಖಿಸುತ್ತಾರೆ. ಸಾವರ್ಕರರಂತೆ ಬ್ರಿಟಿಷ್ ಇತಿಹಾಸಕಾರರೆಲ್ಲರೂ ಕ್ರಾಂತಿಯಲ್ಲಿ “ಹರಹರ ಮಹಾದೇವ್” ಘೋಷಣೆ ಮೊಳಗಿತ್ತೆಂದು ಬರೆಯುತ್ತಾರೆ. ಅಲ್ಲದೆ ಅಝಿಮುಲ್ಲಾ ಖಾನನಿಗೆ ಕಾನ್‌ಸ್ಟಾಂಟಿನೋಪಲಿನಲ್ಲಿ ಸಿಕ್ಕ ರಸ್ಸಲ್ ಕೂಡ ೫೭ರ ಕ್ರಾಂತಿಯ ಪ್ರತ್ಯಕ್ಷ ವರದಿಯನ್ನು ’ದಿ ಟೈಮ್ಸ್’ಗೆ ಮಾಡುತ್ತಾನೆ. ಅದರಲ್ಲೂ ಆತ ಭಾರತ್ ಮಾತಾ ಕೀ ಜಯ್ ಮೊಳಗಿದ ಸಂಗತಿಯನ್ನೇನೂ ಉಲ್ಲೇಖಿಸಲಿಲ್ಲ. ಸಾವರ್ಕರರಿಗೆ ೧೮೫೭ರ ಕ್ರಾಂತಿಯನ್ನು ಬರೆಯುವ ಉದ್ದೇಶ ಮತ್ತು ಸಂದರ್ಭ ಬೇರೆಯೇ ಇತ್ತು. ಅದರಲ್ಲಿ ಅವರು ಕೊನೆಯ ಮೊಘಲ ಜಾರ್ ಶಾನನ್ನು ಕೂಡ ಕ್ರಾಂತಿಕಾರಿ ಎಂದೇ ಬಿಂಬಿಸಿದ್ದಾರೆ. ಉಳಿದೆಲ್ಲಾ ಮೊಘಲರನ್ನು ಮತಾಂಧರು ಎಂದೇ ಚಿತ್ರಿಸಿದ ಸಾವರ್ಕರರಿಗೆ ಕೊನೆಯ ಮೊಘಲನನ್ನು ಹೀಗೆ ಚಿತ್ರಿಸಿರುವುದರ ಹಿಂದೆ ಒಂದು ಘನವಾದ ಮತ್ತು ಜಾಗೃತಿಯ ಉದ್ದೇಶವಿತ್ತು. ಹಾಗಾಗಿ ಅವರು ಅಝಿಮುಲ್ಲಾ ಖಾನನನ್ನೂ ಏಕರಾಷ್ಟ್ರ ಚಿಂತನೆಯಿಂದ ಹೋರಾಡಿದ ಕ್ರಾಂತಿಪುರುಷ ಎಂದೇ ಉಲ್ಲೇಖಿಸಿದ್ದರು. ಅದರ ಹೊರತಾಗಿ ಭಾರತ್ ಮಾತಾ ಕೀ ಜಯ್ ಘೋಷಣೆಯನ್ನು ಆತ ಹೇಗೆ ಪ್ರಚುರಪಡಿಸಿದ ಎಂಬುದನ್ನೇನೂ ವಿವರಿಸಿಲ್ಲ. ಅಂದರೆ ಅಝಿಮುಲ್ಲಾ ಖಾನ ೫೭ರ ಕ್ರಾಂತಿಯಲ್ಲಿ ಈ ಘೋಷಣೆಯನ್ನು ಮೊಳಗಿಸಿದನೆಂಬುದಕ್ಕೆ ಯಾವ ದಾಖಲೆಗಳೂ ಇಲ್ಲ. ಆದರೆ ೫೭ರ ಕ್ರಾಂತಿಯಲ್ಲಿ ಕೆಲ ಮುಸಲ್ಮಾನರು ಮೊಘಲರನ್ನು ದೆಹಲಿ ಸಿಂಹಾಸನದಲ್ಲಿ ಮರುಸ್ಥಾಪಿಸುವ ಏಕೈಕ ಉದ್ದೇಶದಿಂದ ಪಾಲ್ಗೊಂಡಿದ್ದರೆಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಹಾಗಾದರೆ ಟರ್ಕಿ ಗೂಢಚಾರರ ಸಂಪರ್ಕದಲ್ಲಿದ್ದ ಅಝಿಮುಲ್ಲಾ ಖಾನನಿಗೂ ಅಂಥದ್ದೇ ಉದ್ದೇಶವಿತ್ತೆಂದು ಯಾಕೆ ಹೇಳಬಾರದು? ಈ ಎಡಚರು ಎಂಥ ಚಾಣಾಕ್ಷ್ಯರೆಂದರೆ ಸಾವರ್ಕರರ ಪುಸ್ತಕವನ್ನಿಟ್ಟುಕೊಂಡೇ ಭಾರತ್ ಮಾತಾ ಜಯ್ ಘೋಷಣೆಗೆ ಅಝಿಮುಲ್ಲಾ ಖಾನನನ್ನೇ ವಾರಸುದಾರನನ್ನಾಗಿ ಮಾಡಿಬಿಡುತ್ತಾರೆ. ಪಿಣರಾಯಿಯಂಥ ಕಾಮ್ರೆಡನಿಗಂತೂ ಅಂಥ ವಿದ್ಯೆ ಕರತಲಾಮಲಕ!
ಹಾಗಾದರೆ ಭಾರತ್ ಮಾತಾ ಕೀ ಜಯ್ ಘೋಷಣೆ ಮೊದಲು ಮೊಳಗಿದ್ದೆಲ್ಲಿ? ಆ ಸತ್ಯವನ್ನು ಪಿಣರಾಯಿ ಮುಚ್ಚಿಡಲು ಬೇರೇನಾದರೂ ಕಾರಣಗಳಿವೆಯೇ?
ಇಲ್ಲದೇ ಏನು? ಯಾವ ಘೋಷಣೆ ಬಂಗಾಳ ವಿಭಜನೆಯ ವಿರುದ್ಧ ಮನೆಮನೆಯಲ್ಲಿ ಕ್ರಾಂತಿಯ ಕಿಡಿ ಹಾರಲು ಕಾರಣವಾಗಿತ್ತೋ, ಯಾವ ಘೋಷಣೆ ಸನಾತನ ಭಾರತದ ಸ್ವಭಾವವನ್ನು ಮರಳಿ ಜಾಗೃತಗೊಳಿಸಿತ್ತೋ, ಯಾವ ಘೋಷಣೆ ಈ ನೆಲಕ್ಕೊಂದು ಜೀವವಿದೆ, ಆ ಜೀವದಲ್ಲಿ ದೈವತ್ವವಿದೆ ಎಂಬ ಭಾವನೆಯನ್ನು ಉದ್ದೀಪಿಸಿತ್ತೋ, ಯಾವ ಘೋಷಣೆ ಕಾಳಿಯಲ್ಲಿ, ದುರ್ಗೆಯಲ್ಲಿ ದೇಶವನ್ನು ಕಂಡಿತ್ತೋ-ರಾಷ್ಟ್ರಕ್ಕೊಂದು ಆಕಾರವನ್ನು ಕಲ್ಪಿಸಿತ್ತೋ ಅಂಥ ಭಾರತಮಾತೆಯ ಶಕ್ತಿಗೆ ಕಾಲಕಾಲಕ್ಕೆ ಮತಾಂಧರು, ದಾಳಿಕೋರರು, ಅರಾಷ್ಟ್ರೀಯರೆಲ್ಲಾ ಹೆದರಿದ್ದರು. ಇನ್ನು ಕಮ್ಯುನಿಸ್ಟರು ಹೆದರಿದ್ದಲ್ಲಿ ಆಶ್ಚರ್ಯವೇನಿದೆ? ಹಾಗಾಗಿ ಅವರು ಭಾರತಮಾತೆಗೂ ಕತೆ ಕಟ್ಟಿದರು. ಮುಸಲ್ಮಾನನೊಬ್ಬ ಭಾರತಮಾತೆಯ ಕಲ್ಪನೆಯನ್ನು ಕಟ್ಟಿಕೊಟ್ಟ ಎಂಬ ವಾದದ ಮೂಲಕ ಅದರೊಳಗೆ ಶಾಸ್ತ್ರೀಯ, ತಾತ್ವಿಕ ಮತ್ತು ಜಾಗೃತಿಯ ಸಂಗತಿಗಳೇನಿಲ್ಲ ಎಂಬುದನ್ನು ಕಮ್ಯುನಿಸ್ಟರಿಗೆ ಮಂಡಿಸಬೇಕಿತ್ತು. ಆದರೆ ಬಂಗಾಳಿಗಳು ಕಂಡ ಭಾರತಮಾತೆ ದುಷ್ಟದಮನಕ್ಕೆ ಅವತಾರವೆತ್ತಿದ ತಾಯಿ ದುರ್ಗೆಯಂತೆ ಲಘಿಮಾ ಸಿದ್ಧಿಯಾಗಿ ಬೆಳೆಯುತ್ತಲೇ ಇದ್ದಳು. ಹಾಗೆ ದುರ್ಗೆ ಸ್ವರೂಪಿಣಿ ಭಾರತಮಾತೆಯನ್ನು ಚಿತ್ರಿಸಿದವರಾರೂ ಎಮೋಶನಲ್ ಫೂಲ್‌ಗಳಾಗಿರಲಿಲ್ಲ. ಶ್ರೇಷ್ಠ ಕವಿ-ಸಾಹಿತಿಗಳು, ತತ್ತ್ವಶಾಸಜ್ಞರು, ಕಲಾವಿಧರೆಲ್ಲರೂ ದೇಶವನ್ನು ಮಾತೆಯ ಸ್ವರೂಪದಲ್ಲಿ ಕಂಡರು. ವಂಗಭಂಗದ ವಿರುದ್ಧ ಪ್ರತಿ ಮನೆಗಳನ್ನೂ ಕ್ರಾಂತಿಯ ಕೋಟೆಗಳನ್ನಾಗಿ ಬದಲಿಸಿದರು. ಬಂಕಿಮರ “ವಂದೇ ಮಾತರಂ’ ಬಂಗಾಳವನ್ನು ದಾಟಿ ದೇಶಾದ್ಯಂತ ಮೊಳಗಿತು. ಭಾರತಮಾತೆ ಸರಪಳಿಯಲ್ಲಿ ಬಂಧಿಸಲ್ಪಟ್ಟಂತೆ, ಬ್ರಿಟಿಷರು ಅವಳನ್ನು ಭರ್ಚಿಗಳಲ್ಲಿ ಇರಿಯುತ್ತಿರುವಂತೆ ಜನ ತಮ್ಮ ದೇಶವನ್ನು ನೋಡಿದರು. ೧೮೭೩ರಲ್ಲಿ ಕಿರಣಚಂದ್ರ ಬ್ಯಾನರ್ಜಿ ಎಂಬವರು ಭಾರತ್ ಮಾತಾ ಎಂಬ ನಾಟಕವನ್ನು ಬಂಗಾಳಾದ್ಯಂತ ಪ್ರದರ್ಶನ ಮಾಡಿದ್ದರು. ಬುದ್ದದೇವ ಮುಖ್ಯೋಪಾಧ್ಯಾಯರೆಂಬವರು ತಮ್ಮ ’ಮಾನುಷಿ’ ಪತ್ರಿಕೆಯಲ್ಲಿ ಭಾರತಮಾತೆಯ ಕತೆಯೊಂದನ್ನು ಪ್ರಕಟಿಸಿದರು. ೧೯೦೪ರಲ್ಲಿ ಕಲಾವಿಧ ಅಬೀಂದ್ರನಾಥ ಠಾಗೋರ್ ಎಂಬವರು ಬಂಗಾಳಿ ಶೈಲಿಯಲ್ಲಿ ನಾಲ್ಕು ಭುಜಗಳ ಭಾರತಮಾತೆಯನ್ನು ಚಿತ್ರಿಸಿದರು. ದಕ್ಷಿಣದಲ್ಲಿ ಸುಬ್ರಹ್ಮಣ್ಯ ಭಾರತಿಯವರು ತಮ್ಮ ತಮಿಳು ಪತ್ರಿಕೆ “ವಿಜಯ”ದಲ್ಲಿ ದುರ್ಗಾಸ್ವರೂಪಿಣಿ ಭಾರತಮಾತೆಯ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದ್ದರು. ಹೀಗೆ ಎಷ್ಟೋ ಜನ ಭಾರತಮಾತೆಗೆ ಜೀವ ತುಂಬಿದ್ದರು. ಕ್ರಮೇಣ ಭಾರತ್ ಮಾತಾ ಮಂದಿರಗಳೂ ನಿರ್ಮಾಣವಾಗತೊಡಗಿತು. ಕ್ರಾಂತಿಕಾರಿಗಳಿಂದ ಹೊರಬಿದ್ದ ಭಾರತ್ ಮಾತಾ ಕೀ ಜಯ್ ಎಂಬ ಬೀಜಮಂತ್ರವನ್ನು ಮುಂದೆ ಗಾಂಧಿವಾದಿಗಳು ಕೂಡ ಬಳಸಲಾರಂಭಿಸಿದರು. ಅದೊಂದೇ ಘೋಷಣೆಗೆ ನೇಣಿಗೇರಿದ, ಜೈಲು ಸೇರಿದ, ದೇಶಭ್ರಷ್ಟರಾದ ಅಸಂಖ್ಯ ಹೋರಾಟಗಾರನ್ನು ಅಂದು ಭಾರತ ಮಾತೆ ನೋಡಿದ್ದಳು.
ಇವೆಲ್ಲಾ ಪಿಣರಾಯಿಗೆ ತಿಳಿದಿರುವ ಸಾಧ್ಯತೆ ಇಲ್ಲ. ಏಕೆಂದರೆ ಕಾಮ್ರೆಡ್‌ಗಳಾರೂ ಸ್ವಾತಂತ್ರ್ಯ ಹೋರಾಟಗಾರರ ಭಾರತಮಾತೆಯನ್ನು ಒಪ್ಪಿಲ್ಲ, ಭಾರತವನ್ನೂ ಒಪ್ಪಿಲ್ಲ! ದೇಶ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದಾಗಲೂ ಕೆಲವು ಕಮ್ಯುನಿಸ್ಟರು ರಷ್ಯಾ ಜಪ ಮಾಡುತ್ತಾ ಭಾರತ್ ಮಾತಾ ಕೀ ಜಯ್ ಎಂದವರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದರು. ಈ ಘೋಷಣೆಯಲ್ಲೊಂದು ತಾಕತ್ತಿದೆ, ತೇಜಸ್ಸಿದೆ ಎಂಬುದು ಅಂದು ಬ್ರಿಟಿಷರಿಗೂ, ಕಮ್ಯುನಿಸ್ಟರಿಗೂ ಅರ್ಥವಾಗಿಹೋಗಿತ್ತು. ಅದನ್ನು ಅಡಗಿಸುವ ಎಲ್ಲಾ ಪ್ರಯತ್ನಗಳನ್ನು ಅಂದು ಮಾಡಲಾಗುತ್ತಿತ್ತು. ಒಂದು ವೇಳೆ ಅಂದು ಭಾರತದ ಮುಸಲ್ಮಾನರೆಲ್ಲರೂ ದ್ವಿರಾಷ್ಟ್ರ ಸಿದ್ಧಾಂತದೆದುರು ಭಾರತ್ ಮಾತಾ ಕೀ ಜಯ್ ಮೊಳಗಿಸಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತು. ಆದರೆ ಅಂದಿನ ಮುಸಲ್ಮಾನ ನಾಯಕರು “ಲಡಕೇ ಲೇಂಗೇ ಪಾಕಿಸ್ಥಾನ್’ ಎಂದರೇ ಹೊರತು ಭಾರತ್ ಮಾತಾ ಕೀ ಜಯ್ ಎನ್ನಲಿಲ್ಲ! ಭಾರತದ ಅಧ್ಯಾತ್ಮ, ಕ್ಷಾತ್ರ, ಸ್ವಾಭಿಮಾನ ಮತ್ತು ಅಖಂಡತೆಯ ಧ್ವನಿಯಿದ್ದ ಭಾರತ್ ಮಾತಾ ಕೀ ಜಯ್ ಘೋಷಣೆಯ ಅಂತರಾಳದಲ್ಲಿ ಭಾರತವನ್ನು ವಿಶ್ವಗುರುವನ್ನಾಗಿಸುವ ಮಹಾನ್ ಸಂಕಲ್ಪವಿತ್ತು, ಮಹಾ ಭಯವಿತ್ತು. ಅದರ ಶಕ್ತಿಯ ಅರಿವು ಇಡೀ ದೇಶಕ್ಕಾಗುತ್ತಿತ್ತು. ದೇಶ ಒಡೆಯಲು ಹೊರಟವರಿಗೆ ಆ ಘೋಷಣೆಯ ಮೇಲೆ ಹಿಂದಿನಿಂದಲೂ ತೀವ್ರ ಆಕ್ರೋಶವಿತ್ತು. ಇನ್ನೊಂದೆಡೆ ಯಾವ ಘೋಷಣೆಯಿಂದ ಸ್ವಾತಂತ್ರ್ಯವೆಂಬುದನ್ನು ಪಡೆದೆವೋ ಅದೇ ಭಾರತ್ ಮಾತಾ ಕೀ ಜಯ್ ಅನ್ನು ಕಾಂಗ್ರೆಸ್ ಎಲ್ಲಿಡಬೇಕೋ ಅಲ್ಲೇ ಇಟ್ಟಿತು. ಅದರ ಶಕ್ತಿ-ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಅವಕಾಶವನ್ನೇ ಕಳೆದುಕೊಂಡಿತು. ಇವೆಲ್ಲವೂ ಅಸಹನೆ ಮೈವೆತ್ತ ಜನರಲ್ಲಿ ಸಹಜವಾಗಿರುವ ಪ್ರತ್ಯೇಕತೆಯನ್ನು ಹೆಚ್ಚಿಸಿತು. ಮುಸಲ್ಮಾನರಿಗೆ ಭಾರತ್ ಮಾತಾ ಕೀ ಜಯ್ ಎನ್ನುವ ಸಂದರ್ಭವೇ ಇಲ್ಲವೆನ್ನುವಂತೆ ಕಾಂಗ್ರೆಸ್ ನಡೆದುಕೊಂಡಿತು. ತನ್ನ ದೇಶದಲ್ಲೇ ತನ್ನ ಧ್ವಜವನ್ನು ಹಾರಿಸಲಾಗದ ವಾತಾವರಣವನ್ನು ನಿರ್ಮಾಣ ಮಾಡಿಕೊಂಡಿತು.
ಇಂದು ಭಾರತ ಎದ್ದೇಳುತಿರುವ ಪರಿ ಕೂಡ ಭಾರತವನ್ನು ಮಾತೆ ಎಂದು ಪೂಜಿಸುವವರಿಂದಲೇ ಎನ್ನುವುದೂ ಕಾಮ್ರೆಡ್‌ಗಳಿಗೆ ತಿಳಿದಿದೆ. ಹಾಗಾಗಿ ಭಾರತಮಾತೆಯ ಸೃಷ್ಟಿಕರ್ತ ಒಬ್ಬ ಮುಸಲ್ಮಾನ ಎನ್ನುತ್ತಿದ್ದಾರೆ! ಒಂದು ವೇಳೆ ಭಾರತಮಾತೆಯ ಕಲ್ಪನೆಯನ್ನು ಅಝೀಮುಲ್ಲಾ ಖಾನನೇ ಪ್ರಚುರಪಡಿಸಿದ್ದನೆಂದುಕೊಂಡರೂ ಮುಸಲ್ಮಾನರೇನೂ ಗಲ್ಲಿಯಲ್ಲಿ ನಿಂತು ನಾರಾಯ್ ತಕ್ದೀರ್… ಬದಲು ಭಾರತ ಮಾತಾ ಕೀ… ಎಂದು ಘೋಷಣೆ ಕೂಗಿಬಿಡುತ್ತಿದ್ದರೇ? ಪಿಣಾರಾಯಿ ಮಾತುಗಳೆಲ್ಲವೂ ಮುಸಲ್ಮಾನರಿಗೆ ತಿಳಿದಿತ್ತು ಎನ್ನುವುದಾದಾರೆ ಇದುವರೆಗೂ ಮುಸಲ್ಮಾನರ ರ‍್ಯಾಲಿ, ಕಾರ್ಯಕ್ರಮಗಳಲೆಲ್ಲಾ ಭಾರತ್ ಮಾತಾ ಕೀ ಜಯ್ ಘೋಷಣೆಗಳೇ ಕೇಳಿಬರಲಿಲ್ಲವೇಕೆ? ಪಿಣರಾಯಿಗಾದರೂ ಅದು ನೆನಪಾಗಬೇಕಿತ್ತಲ್ಲಾ…? ಆದರೂ ಪಿಣರಾಯಿ ಮಲಪ್ಪುರಂನಲ್ಲಿ ನಿಂತು ಸುಳ್ಳು ಹೇಳುತ್ತಿದ್ದಾರೆಂದರೆ ಮತಾಂಧರನ್ನು ಓಲೈಸುವ ಕಮ್ಯುನಿಸ್ಟರ ಅತ್ಯುತ್ಸಾಹವನ್ನು ಅಂದಾಜಿಸಬಹುದು.
ಭಾರತ್ ಮಾತಾ ಕೀ ಜಯ್ ಅನ್ನು ಮುಸಲ್ಮಾನನೇ ಕಂಡುಹುಡುಕಿದ, ಮೊಟ್ಟಮೊದಲು ಕೂಗಿದ ಎನ್ನುವುದೇನಾದರೂ ಇದ್ದಿದ್ದರೆ ಮೊದಲು ಅದನ್ನು ಶ್ಲಾಘಿಸಿ, ಪ್ರಚಾರ ಕೊಡುತ್ತಿದ್ದವರು ಆರೆಸ್ಸೆಸ್ಸೇ ಆಗಿರುತ್ತಿತ್ತೇ ಹೊರತು ಪಿಣರಾಯಿಯಂತೂ ಅಲ್ಲ! ಆರೆಸ್ಸೆಸ್ಸಿನ ಉದ್ದೇಶ ಕೂಡ ಯಾವ ಮತ-ಪಂಥಗಳೇ ಇರಲಿ ಭಾರತವನ್ನು ಮಾತೆಯ ದೃಷ್ಟಿಯಿಂದ ನೋಡುವ ವ್ಯಕ್ತಿಗಳು ನಿರ್ಮಾಣವಾಗಬೇಕೆನ್ನುವುದೇ. ಅಂದರೆ ಪಿಣರಾಯಿ ಹೇಳಿದ ಕತೆ ನಿಜವೇ ಆಗಿರಲಿ ಎಂದೇ ಆರೆಸ್ಸೆಸ್ ಬಯಸುತ್ತದೆ. ಪಿಣರಾಯಿ ಸುಳ್ಳನ್ನೇನೋ ಚೆನ್ನಾಗಿ ಹೇಳಿದ್ದರು. ಆದರೆ ಆರೆಸ್ಸೆಸ್ ಅನ್ನು ಗುರಿಯಾಗಿಸಿ ಸುಳ್ಳು ಹೇಳಿ ಸಿಕ್ಕಾಕಿಕೊಂಡರು. ಮಲಪ್ಪುರಂ ರ‍್ಯಾಲಿಯಲ್ಲಿ ಪಿಣರಾಯಿಯ ರಸವತ್ತಾದ ಮಾತುಗಳನ್ನು ಕೇಳಿ ಮುಸಲ್ಮಾನರಾರೂ ಭಾರತ್ ಮಾತಾ ಕೀ ಜಯ್ ಎಂದು ಕೂಗಿರಲಿಲ್ಲ ಎಂಬಲ್ಲಿಗೆ ಕಮ್ಯುನಿಸ್ಟರ ಸುಳ್ಳು ಬಯಲಾಗಿದೆ ಎಂದೇ ಅರ್ಥ!
ರ‍್ಯಾಲಿಯ ನಂತರ ಮಲಪ್ಪುರಂನ ಮುಸಲ್ಮಾನರೇ ಪಿಣರಾಯಿಯನ್ನು ”ಎತ್ತರೆ ಕಳ್ಳಂ ಪರೆಯುನ್ನ ವಿಜಯಟಾ?” (ಎಷ್ಟೂ ಸುಳ್ಳು ಹೇಳ್ತೀರಾ ವಿಜಯಣ್ಣಾ?) ಎಂದು ಕೇಳಿರಬಹುದು.

Leave a comment