ಸಾಂಸ್ಕೃತಿಕ ರಾಯಭಾರಿಗಳ ಬದುಕಿನಲ್ಲಿ ಎಷ್ಟೊಂದು ಸಂದೇಶಗಳು?

ramlal13
೧೯೬೪ರ ರಾಜಸ್ಥಾನ ಪ್ರಾಂತದ ಸಂಘ ಶಿಕ್ಷಾ ವರ್ಗ ಉದಯಪುರದಲ್ಲಿ ನಡೆಯುತ್ತಿತ್ತು. ಶಿಬಿರದ ಒಂದು ದಿನ ಸಂಘದ ಪ್ರಚಾರಕರೂ, ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದ ದೀನದಯಾಳ ಉಪಾಧ್ಯಾಯರ ಬೌದ್ಧಿಕ್ (ಉಪನ್ಯಾಸ)ಅನ್ನು ಏರ್ಪಡಿಸಲಾಗಿತ್ತು. ಉಪನ್ಯಾಸದಲ್ಲಿ ಮಾತನಾಡುತ್ತಾ ಉಪಾಧ್ಯಾಯರು, ‘ಸಂಘದ ಸ್ವಯಂಸೇವಕನು ನನ್ನ ಹಾಗೆಯೇ ರಾಜನೀತಿಯ ಬಗ್ಗೆ ನಿರ್ಲಿಪ್ತನಾಗಿರಬೇಕು’ ಎಂದರು! ಶಿಬಿರಾರ್ಥಿಗಳಿಗೆ ಈ ವಾಕ್ಯ ಅದೆಷ್ಟು ಒಗಟಿನಂತೆ ಕಾಡಿತ್ತೆಂದರೆ ರಾತ್ರಿಯವರೆಗೂ ಕಾದರು, ವಿಶ್ರಾಂತಿಯಲ್ಲಿದ್ದ ಉಪಾಧ್ಯಾಯರನ್ನು ಎಬ್ಬಿಸಿ ಪ್ರಶ್ನೆ ಕೇಳಿಯೇಬಿಟ್ಟರು.
‘ತಾವು ರಾಜಕೀಯ ಪಕ್ಷವೊಂದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳಾಗಿರುವವರು. ತಾವು ಹೇಗೆ ನಿರ್ಲಿಪ್ತರಾಗಿರಲು ಸಾಧ್ಯ?’
ಅದಕ್ಕೆ ದೀನದಯಾಳರು, ‘ನಾನು ರಾಜಕೀಯಕ್ಕಾಗಿ ರಾಜಕೀಯದಲ್ಲಿ ಇಲ್ಲ. ನಾನು ರಾಜಕೀಯದಲ್ಲಿ ಸಂಸ್ಕೃತಿಯ ರಾಯಭಾರಿಯಾಗಿದ್ದೇನೆ. ರಾಜಕೀಯದಲ್ಲಿ ಸಂಸ್ಕೃತಿ ಇಲ್ಲವಾಗಿಬಿಡುವುದು ಒಳಿತಲ್ಲ’ ಎಂದರು. ಒರ್ವ ರಾಜಕಾರಣಿಯಾಗಿ ಇಂಥ ಮಾತನ್ನು ಅಧಿಕಾರಯುತವಾಗಿ ಅವರಿಗೆ ಹೇಳಲು ಹೇಗೆ ಸಾಧ್ಯವಾಯಿತು ಎನ್ನುವುದು ಆರೆಸ್ಸೆಸ್ ಸಿದ್ಧಾಂತಗಳ ಅರಿವಿಲ್ಲದವರಿಗೆ ಅಚ್ಚರಿ ಎನಿಸಬಹುದು. ಆದರೆ ಪಂಡಿತ್ ದೀನದಯಾಳ ಉಪಾಧ್ಯಾಯರು ಅದನ್ನು ಹ್ರದಯದಿಂದಲೇ ಹೇಳಿದ್ದರು ಮತ್ತು ಅವರ ಉತ್ತರಕ್ಕೆ ಯಾರೂ ಸಂದೇಹ ಪಡುವಂತೆಯೂ ಇರಲಿಲ್ಲ. ಏಕೆಂದರೆ ಪರಂಪರಾಗತ ಅರ್ಥದಲ್ಲಿ ಅವರು ರಾಜಕಾರಣಿಯಾಗಿರಲೇ ಇಲ್ಲ. ರಾಜಕಾರಣದಲ್ಲಿದ್ದರೂ ಅವರು ಆ ಹೊತ್ತಿನ ಇತರ ರಾಜಕಾರಣಿಗಳಂತಿರಲಿಲ್ಲ. ರಾಜಕಾರಣದಲ್ಲಿ ದೊಡ್ಡ ಹೊಣೆಗಾರಿಕೆಯಿದ್ದರೂ ಅವರು ಅದಕ್ಕೆ ಅಂಟಿಯೂ ಅಂಟದಂತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಡಿದ್ದ ಅವರಿಗೆ ಬೇರೆ ವೈಯಕ್ತಿಕ ಬದುಕೆಂಬುದೇ ಇರಲಿಲ್ಲ. ೧೯೫೧ರ ಅಕ್ಟೋಬರ್ ೨೧ರಂದು ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದಂದಿನಿಂದ ಧಾರುಣ ವಾಗಿ ಕೊಲೆಯಾಗುವವರೆಗಿನ ೧೭ ವರ್ಷಗಳ ಕಾಲ ಪಂಡಿತ್ ದೀನದಯಾಳ ಉಪಾಧ್ಯಾಯರು ಭಾರತಕ್ಕೆ ಕಂಡಿದ್ದು ಅದೇ ರೀತಿಯಲ್ಲಿ.
ಅವರೊಬ್ಬರಷ್ಟೇ ಅಲ್ಲ, ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಸಂಘದಿಂದ ನೀಯೋಜಿತರಾದ ಸ್ವಯಂಸೇವಕರೆಲ್ಲರೂ ನಮಗೆ ಕಾಣುವುದು ಹಾಗೆಯೇ. ಆದರೆ ಸಂಘವೇಕೆ ರಾಜಕಾರಣಕ್ಕೆ ಸ್ವಯಂಸೇವಕರನ್ನು ಕಳುಹಿಸುತ್ತದೆ? ಕಳುಹಿಸಿದ ಸ್ವಯಂ ಸೇವಕರು ರಾಜಕಾರಣಿಗಳಿಗಿಂತ ಹೇಗೆ ಭಿನ್ನವಾಗಿರುತ್ತಾರೆ? ಗುಂಪಿನಲ್ಲೇಕೆ ಅವರು ಎದ್ದುಕಾಣುತ್ತಾರೆ?-ಮುಂತಾದ ಪ್ರಶ್ನೆಗಳು ಬಹುಜನರಿಗೆ ಇವತ್ತಿಗೂ ಒಂದು ಸೋಜಿಗವೇ. ಏಕೆಂದರೆ ಇಂದು ರಾಜಕಾರಣಕ್ಕೆ ಪಂಡಿತ- ಪಾಮರರೆಲ್ಲರೂ ನೀಡುವ ವ್ಯಾಖ್ಯಾನ ರಾಜಕಾರಣದ ಹಲವು ಮಜಲುಗಳನ್ನು ಮುಚ್ಚಿ, ಅದನ್ನು ಸಂಕೀರ್ಣಗೊಳಿಸಿಬಿಟ್ಟಿದೆ. ಆ ವ್ಯಾಖ್ಯಾನ ಸಂಘ ಮತ್ತು ರಾಜಕಾರಣದ ಸಂಬಂಧದ ಅರ್ಥವನ್ನೇ ವಿಕಾರಗೊಳಿಸಿದೆ.
ಭಾರತದ ರಾಜಕಾರಣ ನಾವಂದುಕೊಂಡಂತೆ ಸಾಗಿಬಂದಿಲ್ಲ ಎನ್ನುವುದಕ್ಕೆ ಸ್ವಾತಂತ್ರ್ಯಾನಂತರ ನಡೆದ ಕೆಲವು ಸೂಕ್ಷ್ಮ ಘಟನಾವಳಿಗಳೇ ಉತ್ತರಗಳನ್ನು ಕೊಡುತ್ತವೆ. ಅಂದರೆ ಸ್ವಾತಂತ್ರ್ಯಾನಂತರದ ರಾಜಕಾರಣ ಗಾಂಧಿ ಅಥವಾ ಬೇರೆ ಯಾವುದೇ ಚಿಂತಕರು ಅಂದುಕೊಂಡಂತೇನೂ ನಡೆದಿರಲಿಲ್ಲ. ಏಕೆಂದರೆ ಗಾಂಧಿ ಅಂದುಕೊಂಡಂತೆ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ವಿಸರ್ಜನೆಯಾಗಿರಲಿಲ್ಲ, ನೆಹರೂ ನಿವೃತ್ತರೂ ಆಗಿರಲಿಲ್ಲ. ಆದರೆ ಕಾಂಗ್ರೆಸಿನ ಬಹುಜನರ ಅಪೇಕ್ಷೆ ಸಾಂಸ್ಕೃತಿಕ ರಾಷ್ಟ್ರವಾದವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಸೇರಿ ರಾಜಕಾರಣದ ಹಡಗನ್ನು ಮುನ್ನಡೆಸಬೇಕೆಂದಿತ್ತು. ಅದು ಅಂದಿನ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ದಾಸ್ ಟಂಡನ್‌ರಂಥವರ ಅಪೇಕ್ಷೆ ಕೂಡಾ ಆಗಿತ್ತು. ಕಾಂಗ್ರೆಸಿನ ರಾಷ್ಟ್ರೀಯ ಅಧಿವೇಶನದಲ್ಲಿ ಅದು ಚರ್ಚೆಗೆ ಬಂದು ಕೆಲ ನೆಹರೂ ಮನೆತನಕ್ಕೆ ಸಲಾಮು ಹಾಕುವ ಕಾಂಗಿಗಳು ಅದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದರು. ಕೋಮುವಾದಿಗಳೊಂದಿಗೆ ಕಾಂಗ್ರೆಸ್ ಸೇರಿಸಿಕೊಳ್ಳುವುದೆಂದರೇನು? ಎಂದು ಅವರು ಗಲಾಟೆ ಆರಂಭಿಸಿದರು. ಅಧಿವೇಶನದಲ್ಲಿ ಟಂಡನ್ ಮತ್ತು ಪಟೇಲರಿಗೆ ಜನಬೆಂಬಲವಿದ್ದರೂ ನೆಹರೂ ಪ್ರಣೀತ ಗೂಂಡಾಗಿರಿ ವಿಜ್ರಂಭಿಸಿತು. ಇದೇ ಬೇಸರದಿಂದ ಟಂಡನ್ ಕಾಂಗ್ರೆಸಿಗೆ ರಾಜಿನಾಮೆ ಸಲ್ಲಿಸಿದರು. ಅದರ ಮರುವರ್ಷವೇ ಪಟೇಲರ ದೇಹಾಂತ್ಯವಾಯಿತು. ಕಾಂಗ್ರೆಸ್ ನೆಹರೂ ಮನೆತನದ ಉಂಬಳಿ ಭೂಮಿಯಾಯಿತು.
ಇವೆಲ್ಲವನ್ನೂ ಸಂಘ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಸಮಾಜವಾದಿಗಳತ್ತ ಜನರ ನಿರ್ಲಕ್ಷ್ಯ, ದೇಶ ರಾಷ್ಟ್ರೀಯವಾದದತ್ತ ನೆಟ್ಟಿದ್ದ ಚಿತ್ತ, ಮಹಾ ಮಹಾ ನಾಯಕರ ಸೈದ್ಧಾಂತಿಕ ಬದ್ಧತೆಗಳನ್ನು ಅದು ಗಂಭೀರವಾಗಿ ಆಲೋಚಿಸಿತು. ಅದೇ ಹೊತ್ತಿಗೆ ಡಾ|ಶ್ಯಾಮ ಪ್ರಸಾದ ಮುಖರ್ಜಿ ಮತ್ತು ಗುರೂಜಿಯವರ ಭೇಟಿ ನಡೆದು ಭಾರತೀಯ ಜನಸಂಘ ಸ್ಥಾಪನೆಯಾಯಿತು. ಆ ಸಂದರ್ಭದಲ್ಲಿ ಎಲ್ಲೋ ಉತ್ತರ ಪ್ರದೇಶದಲ್ಲಿ ಪ್ರಚಾರಕರಾಗಿದ್ದ ದೀನದಯಾಳ ಉಪಾಧ್ಯಾಯರನ್ನು ನಾಗಪುರಕ್ಕೆ ಕರೆದ ಗುರೂಜಿ ಗೋಳವಲಕರ್ ಮುಂದೆ ರಾಜಕಾರಣದಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು. ಗಾಬರಿಗೊಂಡ ಉಪಾಧ್ಯಾಯರು ‘ರಾಜಕಾರಣ ನನಗೆ ಒಗ್ಗದ ಕ್ಷೇತ್ರ’ಎಂದರು. ಗುರೂಜಿಯವರು, ‘ಅದು ನಿನಗೆ ಒಗ್ಗದ ಕ್ಷೇತ್ರವೆಂದೇ ನಿನ್ನನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ’ ಎಂದರು! ದೀನದಯಾಳರು ತಮಗೆ ಒಗ್ಗದ ಕ್ಷೇತ್ರವನ್ನು ಜನರಿಗೆ ಒಗ್ಗಿಸಬೇಕಿತ್ತು, ಅದರಲ್ಲಿ ಸಲರಾಗಬೇಕಿತ್ತು! ಮುಂದೆ ಜನಸಂಘ ಬೆಳೆದು ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿದ್ದು, ಉಪಾಧ್ಯಾಯರ ಬಲಿದಾನವಾಗಿದ್ದು, ಜನಸಂಘ ಬಿಜೆಪಿಯಾಗಿ ಬದಲಾಗಿದ್ದೆಲ್ಲವೂ ಇಂದು ಇತಿಹಾಸ.
ಅಂದು ಗುರೂಜಿಯವರು ರಾಜಕಾರಣದಲ್ಲಿ ಮೌಲ್ಯವರ್ಧನೆಗಾಗಿ ಕಳುಹಿಸಿದ ಮಹಾತ್ಮರುಗಳೆಲ್ಲರೂ ಹಾಗೆಯೇ ಬಾಳಿದರು. ದೇಶ ಕಾರ್ಯವೆಂದು ಶಿರಸ್ಸಾ ವಹಿಸಿ ಅದನ್ನು ನಿಭಾಯಿಸಿದರು. ವಾಜಪೇಯಿಯಂಥ ನಾಯಕರೇ ಸಂಘದ ‘ಸೂಚನೆ’ ಎಂಬ ಒಂದೇ ಕಾರಣಕ್ಕೆ ಪತ್ರಿಕಾ ಸಂಪಾದಕತ್ವದ ಹೊಣೆ ಹೊತ್ತರು, ಮರುದಿನ ಸೂಚನೆ ಬಂದಾಗ ಸಂಪಾದಕತ್ವವನ್ನು ತ್ಯಜಿಸಿ ರಾಜಕಾರಣಿಯಾದರು. ಗೋರಕ್‌ಪುರದಲ್ಲಿ ಸಂಘದ ಪ್ರಚಾರಕರಾಗಿದ್ದಾಗಲೇ ಗುರೂಜಿಯವರ ಕರೆಗೆ ಓಗೊಟ್ಟು ಬಂದ ನಾನಾಜಿ ದೇಶಮುಖರು ಜನಸಂಘದ ಕಾರ್ಯಕರ್ತರಾದರು. ಇನ್ನೇನು ಬಿಜೆಪಿ ರಚನೆಯಾಗುವ ಹೊತ್ತಲ್ಲಿ ರಾಜಕಾರಣ ತ್ಯಜಿಸಿ ಚಿತ್ರಕೂಟಕ್ಕೆ ಮರಳಿ ತಪಸ್ವಿಯಂತೆ ಬದುಕಲಾರಂಭಿಸಿದರು. ರಾಜ ರಾಮನಿಗಿಂತ ನಮಗಿಂದು ಪ್ರೇರಣೆಯಾಗಬೇಕಾದವ ವನವಾಸಿ ರಾಮ ಎಂದು ಆದರ್ಶದ ಬದುಕನ್ನು ನಡೆಸಿದರು. ಇವರಲ್ಲಿ ಎಲ್ಲರೂ ರಾಜಕಾರಣದ ಅನುಭವ ಹೊಂದಿದವರೇ, ಎಲ್ಲರೂ ರಾಜಕೀಯ ಮಾಡಿದವರೇ. ಆದರೆ ಇವರಲ್ಲಿ ಯಾರಿಗೂ ರಾಜಕಾರಣ ಮೊದಲ ಆದ್ಯತೆಯಾಗಲೇ ಇಲ್ಲ. ಸಮಾಜದ ಎಲ್ಲಾ ಅಂಗಗಳಂತೆ ರಾಜಕಾರಣವೂ ಒಂದು ಅಂಗ ಎಂದು ಇದ್ದಷ್ಟು ದಿನ ದುಡಿದು ಮರುದಿನ ‘ಸೂಚನೆ’ ಎಂಬ ಒಂದು ಪದಕ್ಕೆ ಜೋಳಿಗೆ ಹೊತ್ತು ನಡೆದರು.
ಇಷ್ಟೆಲ್ಲಾ ಸಂಗತಿಗಳು ಇತಿಹಾಸಕ್ಕೆ ಸೇರಿಹೋದ ಸಂಗತಿಗಳಲ್ಲ. ಇಂದಿಗೂ ಸಂಘ ನಡೆಯುತ್ತಿರುವುದು ಹಾಗೆಯೇ. ಕಳೆದ ೯ ದಶಕಗಳಿಂದ ಸಂಘ ಬೆಳೆಯುತ್ತಿರುವುದಕ್ಕೆ ಕಾರಣ ಕೂಡಾ ಅದೇ ನಿಷ್ಠೆ, ಅದೇ ಬದ್ಧತೆ, ಅದೇ ವೈಚಾರಿಕ ಸ್ಪಷ್ಟತೆ. ಮಹತ್ವಾಕಾಂಕ್ಷೆ-ಸ್ಪರ್ಧೆಗಳೇ ಮುಖ್ಯವಾಗಿರುವ ರಾಜಕೀಯ ಕ್ಷೇತ್ರದಲ್ಲಿ ಇಂಥದ್ದೂ ನಡೆಯಬಹುದು ಎಂಬುದಕ್ಕೆ ಇಂಥ ಕೆಲವು ವ್ಯಕ್ತಿತ್ವಗಳು ರಾಜಕಾರಣಕ್ಕೆ ಶೋಭೆಯನ್ನು ತರುತ್ತವೆ. ಇವೆಲ್ಲಕ್ಕೂ ಮೂಲ ಕಾರಣಗಳನ್ನು ಹುಡುಕುತ್ತಾ ಹೋದರೆ ಸಿಗುವ ಉತ್ತರ ಸಂಘದ ವ್ಯಕ್ತಿ ನಿರ್ಮಾಣ ಎಂಬ ಅತ್ಯಂತ ಸಹಜ ಪದಪುಂಜ. ಸಂಘಟನೆಯೇ ಇರಲಿ, ಸಮಾಜವೇ ಇರಲಿ, ರಾಜಕಾರಣವೇ ಇರಲಿ, ಸಂಸ್ಕೃತಿಯೇ ಇರಲಿ ಎಲ್ಲದರಲ್ಲೂ ಸಮನ್ವಯವನ್ನೂ ಆರೋಗ್ಯವನ್ನೂ ಕಾಪಾಡುವ ಸಿದ್ಧೌಷಧ ಈ ವ್ಯಕ್ತಿನಿರ್ಮಾಣ. ಗುರೂಜಿಯವರ ‘ನಾನಲ್ಲ, ನೀನೇ’ ಎಂಬ ಆದರ್ಶ ಕಳೆದ ೯ ದಶಕಗಳಿಂದ ಸ್ವಯಂಸೇವಕ ಎಲ್ಲೆಲ್ಲಿ ಪ್ರವೇಶವಾಗಿದ್ದಾನೋ ಅಲ್ಲೆಲ್ಲಾ ಅನುಭವಕ್ಕೆ ಬಂದಿವೆ. ಆ ಕಾರಣಕ್ಕೆ ರಾಜಕಾರಣಕ್ಕೆ ಹೋದ ಸ್ವಯಂಸೇವಕ ರಾಜಕಾರಣಿಯಾಗದೆ, ಸಮಾಜದ ನಡುವೆ ಕೆಲಸ ಮಾಡುವವನು ಪುಡಾರಿಯಾಗದೆ ಉಳಿದುಕೊಂಡಿದ್ದಾನೆ.
ಕಳೆದ ವಾರ ಬಿಜೆಪಿಯಲ್ಲಿ ಎರಡು ಪ್ರಮುಖ ಬದಲಾವಣೆಗಳು ಸಂಭವಿಸಿದಾಗ ಇಂಥ ಹಳೆಯ ಸಂಗತಿಗಳು ನೆನಪಿಗೆ ಬಂದವು. ಅದುವರೆಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ರಾಮಲಾಲ್ ಅವರು ತಮ್ಮ ೧೩ ವರ್ಷಗಳ ರಾಜಕೀಯ ಬದುಕನ್ನು ಮುಗಿಸಿ ಸಂಘಕಾರ್ಯಕ್ಕೆ ಹೊರಟುಹೋದರು. ಅವರ ಸ್ಥಾನಕ್ಕೆ ಬಿ.ಎಲ್ ಸಂತೋಷ್ ನೇಮಕವಾದರು. ರಾಜಕೀಯದಂಥ ಗೌರವ ಪಡೆಯುವ, ಅಧಿಕಾರವನ್ನು ಅನುಭವಿಸುವ, ಸಕಲ ಅಹಮಿಕೆಗಳನ್ನು ಪ್ರದರ್ಶಿಸಲು ಅವಕಾಶವಿರುವ ಕ್ಷೇತ್ರವನ್ನು ತ್ಯಜಿಸುತ್ತಾ ರಾಮಲಾಲ್‌ಜಿಯವರು ‘ಜವಾಬ್ದಾರಿ ಬದಲಾವಣೆ ಸಂಘದಲ್ಲಿ ಒಂದು ಸ್ವಾಭಾವಿಕ ಪ್ರಕ್ರಿಯೆ. ಜವಾಬ್ದಾರಿ ಯಾವುದೇ ಇರಲಿ, ಕ್ಷೇತ್ರ ಯಾವುದೇ ಇರಲಿ ನಮ್ಮೆಲ್ಲರ ಏಕ ಮಾತ್ರ ಗುರಿ ಭಾರತ ಮಾತೆಯ ಸೇವೆ’ ಎಂದು ಟ್ವಿಟ್ ಮಾಡಿದರು. ಆಗ ಕೂಡಾ ಆರೆಸ್ಸೆಸ್ ಸಿದ್ಧಾಂತಗಳ ಅರಿವಿಲ್ಲದವರಿಗೆ ಅದು ಅಚ್ಚರಿಯಂತೆ ಕಂಡಿತ್ತು. ಅದರ ಮರುದಿನ ರಾಮಲಾಲ್‌ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಸಂಪರ್ಕ ಪ್ರಮುಖ್ ಆಗಿ ಹೊಸ ಹೊಣೆಯನ್ನು ಹೊತ್ತುಕೊಂಡರು. ಹಿಂದಿನ ದಿನದ ರಾತ್ರಿಯವರೆಗೂ ರಾಜಕಾರಣದ ಅಂಗಳದಲ್ಲಿದ್ದ ರಾಮಲಾಲ್ ಅವರಿಗೂ ರಾಜಕಾರಣಕ್ಕೂ ಈಗ ಏನೇನೂ ಸಂಬಂಧವಿರಲಿಲ್ಲ! ಅವರು ಈಗ ಪಕ್ಷದ ಕಛೇರಿಗೂ ಹೋಗುವಂತಿರಲಿಲ್ಲ! ಅಷ್ಟೇ ಏಕೆ ರಾಜಕಾರಣದ ಬಗ್ಗೆ ಚರ್ಚಿಸುವ ಸಂದರ್ಭವೇ ಇರಲಿಲ್ಲ! ಇವು ಟೆಕ್ನಿಕಲ್ ಸಂಗತಿಗಳಾದರೆ, ಇನ್ನು ಕೆಲವು ಸಂಗತಿಗಳು ಸಾಮಾನ್ಯರಿಗೆ ಭಯಾನಕ ಎನಿಸಬಹುದು. ಏಕೆಂದರೆ ಇನ್ನು ರಾಮಲಾಲ್‌ರವರು ಸಂಘದ ಕಠೋರ ಜೀವನ ಶೈಲಿಯಲ್ಲಿ ಸಂಘಕಾರ್ಯವನ್ನು ಮಾಡಬೇಕಿತ್ತು. ಪಕ್ಷದಲ್ಲಿದ್ದಷ್ಟೂ ಸೌಲಭ್ಯಗಳಿನ್ನು ಅವರಿಗೆ ಇರಲಿಲ್ಲ. ಪಕ್ಷದಲ್ಲಿ ಕೆಲಸ ಮಾಡಿದಂತೆ ಇಲ್ಲಿನ್ನು ಕೆಲಸ ಮಾಡಲಾಗದು ಎಂಬುದೂ ಅವರಿಗೆ ತಿಳಿದಿತ್ತು. ಎಲ್ಲವೂ ಭಿನ್ನ, ಸಂಪೂರ್ಣ ಭಿನ್ನ. ಭಿನ್ನ ಬದುಕನ್ನು ಪ್ರೀತಿಯಿಂದ ಒಪ್ಪಿಕೊಳ್ಳುವಂತೆ ಮಾಡಿದ್ದು ಅದೇ ತೊಂಬತ್ತು ವರ್ಷದ ಹಿಂದಿನ ವ್ಯಕ್ತಿನಿರ್ಮಾಣವೆಂಬ ವ್ರತ!
ಈ ಎಲ್ಲಾ ಸಂಗತಿಗಳು ಕೇವಲ ರಾಜಕಾರಣದ್ದೋ ಅಥವಾ ಒಂದು ಸಂಘಟನೆಯದ್ದೋ ಮಾತ್ರವಲ್ಲ. ಅದರಲ್ಲಿ ಭಾರತದ ಸನಾತನತೆಯೇ ಅಡಗಿದೆ. ನಂದ ಸಾಮ್ರಾಜ್ಯವನ್ನು ನಾಶಮಾಡಿದ ಚಾಣಕ್ಯನಿಗೆ ಮಗಧವನ್ನು ಆದರ್ಶ ರಾಜ್ಯವನ್ನಾಗಿ ನಿಲ್ಲಿಸಿದ ನಂತರ ಮಾಡುವಂಥಾ ಕೆಲಸಗಳೇ ಬೇರೆ ಇದ್ದವು. ವಿದ್ಯಾರಣ್ಯರಿಗೆ ವಿಜಯನಗರವನ್ನು ನಿರ್ಮಿಸಿದ ನಂತರ ಮಾಡುವಂಥಾ ಕೆಲಸಗಳು ಬೇರೆಯೇ ಇದ್ದವು. ವಿಶ್ವಾಮಿತ್ರನಿಗೆ ರಾಮ-ಲಕ್ಷ್ಮಣರಿಂದ ಸುಬಾಹು-ಮಾರೀಚರನ್ನು ಸೋಲಿಸಿ ಮಾಡುವಂಥಾ ಕೆಲಸಗಳು ಬೇರೆಯೇ ಇತ್ತು. ಅಂದರೆ ಅವರೆಲ್ಲರೂ ಯುಗಧರ್ಮವನ್ನರಿತು ಸಮಾಜಮುಖಿ ಕಾರ್ಯಗಳಲ್ಲಿ ನಿರತರಾದರೇ ಹೊರತು, ತಾವು ಮೆರೆಯಬೇಕು ಎಂಬ ಆಸೆಯಿರಲಿಲ್ಲ. ಸಂಘ ಕೂಡಾ ಅಂಥಾ ಪರಂಪರೆಯಲ್ಲಿ ಸಾಗಿ ಈಗ ಶತಮಾನಗಳ ಸಮೀಪ ಮುಟ್ಟಿದೆ. ಎಷ್ಟೊಂದು ಸಂಘಟನೆಗಳು ಹುಟ್ಟಿ ಸತ್ತವು! ೧೯೨೫ಕ್ಕೆ ಮೊದಲು ವೈಭವದಿಂದ ಮೆರೆದವರೆಲ್ಲರೂ ಈಗ ಗೆದ್ದಲು ಹಿಡಿದುಹೋಗಿದ್ದಾರೆ. ನಂತರ ಹುಟ್ಟಿದವರೂ ಛಾಪು ಮೂಡಿಸದೆ ಹೊರಟುಹೋಗಿದ್ದಾರೆ. ಸಂಘಕ್ಕಿಂತ ತೀವ್ರವಾಗಿ ಹಿಂದುತ್ವವನ್ನು ಪ್ರತಿಪಾದಿಸುತಿದ್ದವರು, ರಾಷ್ಟ್ರೀಯತೆಯ ಬಗ್ಗೆ ಪ್ರಾಮಾಣಿಕ ಕಾಳಜಿ ಇಟ್ಟುಕೊಂಡಿದ್ದವರು, ಧರ್ಮ ಮಾರ್ಗದ ಅಧ್ವರ್ಯುಗಳೆನಿಸಿಕೊಂಡವರ ಅನುಯಾಯಿಗಳ ಗುಂಪುಗಳಾವುವೂ ಇಂದು ಬದುಕಿಲ್ಲ. ವ್ಯಕ್ತಿ ನಿರ್ಮಾಣ ಎನ್ನದೆ ಬದುಕಲಾದರೂ ಹೇಗೆ ಸಾಧ್ಯ? ನಾನಲ್ಲ ನೀನೇ ಎನ್ನದೆ ಎಷ್ಟು ದಿನ ತಾನೇ ಹಸಿರು ಒಣಗದೇ ಇದ್ದೀತು? ಸಂಘ ಸೃಷ್ಟಿಸಿದ ಸಾಂಸ್ಕೃತಿಕ ರಾಯಭಾರಿಗಳ ಬದುಕು ಎಷ್ಟೊಂದು ಸಂದೇಶಗಳನ್ನು ನೀಡುತ್ತವೆ?

Leave a comment