ಇಪ್ಪತ್ತಾದರೂ, ಎಪ್ಪತ್ತಾದರೂ ಕಾರ್ಗಿಲ್ ಎಂದರೆ ಹಾಗೆಯೇ!

1
ಎಂದಿನಂತೆ ಅಂದೂ ಆ ಇಬ್ಬರು ಕುರಿಗಾಹಿಗಳು ಕುರಿ ಮಂದೆಯೊಂದಿಗೆ ಬೆಟ್ಟವೇರುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಅಂದು ಕುರಿಗಳೇಕೋ ತಮ್ಮ ಎಂದಿನ ದಾರಿಯನ್ನು ಬಿಟ್ಟು ಬೇರೆ ದಾರಿಯನ್ನು ಹಿಡಿದವು. ಕುರಿಗಾಹಿಗಳೂ ಕುರಿಗಳು ಸಾಗಿದ ಹಾದಿಯಲ್ಲಿ ತಾವೂ ಕುರಿಗಳಂತೆ ಸಾಗಿದರು. ಬೆಟ್ಟಗಳಲ್ಲಿ ಆಗ ತಾನೇ ಹಿಮ ಬೀಳಲು ಆರಂಭವಾಗಿತ್ತು. ದೂರದಲ್ಲಿ ಕಡಿದಾದ ಪರ್ವತಗಳು, ಅಲ್ಲಲ್ಲಿ ಹತ್ತಿಯನ್ನು ಚೆಲ್ಲಿದಂತೆ ಬಿದ್ದಿದ್ದ ಹಿಮಗಳ ಸಂದಿಗೊಂದಿಗಳಲ್ಲಿ ಬೆಳೆದಿದ್ದ ಕುರುಚಲುಗಳನ್ನು ಅರಸುತ್ತಾ ಕುರಿಗಳು ಮುಂದೆ ಮುಂದೆ, ಕುರಿಗಾಹಿಗಳು ಹಿಂದೆಹಿಂದೆ ಸಾಗಿದರು. ಕೆಲ ಗಂಟೆಗಳ ನಂತರ ಚುರುಕಿನಿಂದ ಮೇಯುತ್ತಾ ಸಾಗುತ್ತಿದ್ದ ಕುರಿಗಳು ಇದ್ದಕ್ಕಿದ್ದಂತೆ ನಿಂತವು. ಒಂದೊಂದಾಗಿ ಅರಚತೊಡಗಿದವು. ಕುರಿಗಳ ಸದ್ದಿಗೆ ಬೆಟ್ಟದ ಮೇಲಿನ ಬಂಡೆಯೊಂದರ ಹಿಂಬದಿಯಿಂದ ಸಮವಸ್ತ್ರಧಾರಿಯೊಬ್ಬ ಎದ್ದು ಬಂದ. ಕುರಿಗಾಹಿಗಳನ್ನು ಗದರಿಸಿದ. ಕ್ಷಣಹೊತ್ತು ಆಘಾತಗೊಂಡರೂ ಕುರಿಗಾಹಿಗಳಿಗೆ ಆ ಕ್ಷಣಕ್ಕೆ ಎಲ್ಲವೂ ತಿಳಿದುಹೋಯಿತು. ಏಕೆಂದರೆ ಆ ಬೆಟ್ಟದ ಮೇಲಿನ ಬಂಕರುಗಳು ಭಾರತೀಯ ಪಡೆಗಳದ್ದೆಂಬುದು, ಆದರೆ ಹಿಮ ಬೀಳುತ್ತಿದ್ದಂತೆ ಅಲ್ಲಿ ಭಾರತೀಯ ಸೈನಿಕರಿರುವುದಿಲ್ಲವೆಂಬುದು ಅವರಿಗೆ ತಿಳಿದಿತ್ತು. ಅಲ್ಲದೆ ಈ ಸಮವಸ್ತ್ರ ಭಾರತೀಯ ಸೈನಿಕರದ್ದಲ್ಲ ಎಂಬುದೂ ತಿಳಿದಿತ್ತು. ಇಷ್ಟು ತಿಳಿದ ಮೇಲೆ ಅವರಿಗೆ ರಾಷ್ಟ್ರೀಯ ಹೆದ್ದಾರಿ ೧ ಭಾರತದ ಹಿಡಿತದಲ್ಲಿಲ್ಲ ಮತ್ತು ಲಢಾಕ್-ಶ್ರೀನಗರ ದಾರಿ ಆಕ್ರಮಣಕ್ಕೊಳಗಾಗಿದೆ ಎಂಬುದು ತಿಳಿಯದಿರಲು ಸಾಧ್ಯವೇ ಇರಲಿಲ್ಲ. ಕುರಿಗಾಹಿಗಳು ಸತ್ತೆನೋ ಕೆಟ್ಟೆನೋ ಎಂದು ಓಡಿದರು. ಪರ್ವತದ ಕೊರಕಲಿನಿಂದ ಓಡಿದ ಅವರು ನಿಂತಿದ್ದು ೨೦ ಕಿ.ಮೀ ದೂರದ ಮಿಲಿಟರಿ ಬೇಸಿನಲ್ಲಿ. ವಿಚಿತ್ರವೆಂದರೆ ಕುರಿಗಾಹಿಗಳು ತಿಳಿಸುವವರೆಗೂ ರಾಷ್ಟ್ರೀಯ ಹೆದ್ದಾರಿ ಆಕ್ರಮಣಕ್ಕೊಳಗಾಗಿದ್ದು ಆ ಸೈನಿಕ ಕ್ಯಾಂಪಿಗೂ ತಿಳಿದಿರಲಿಲ್ಲ!
ಇದು ನಡೆದಿದ್ದು ೧೯೯೯ರ ಮೇ ೩ರಂದು. ಪಾಕಿಸ್ಥಾನಿ ಸೈನಿಕರು ಭಾರತದ ಬಂಕರುಗಳಿಗೆ ಸೇರಿಕೊಂಡಿದ್ದು ಅದಕ್ಕೂ ಹದಿನೈದು ದಿನಗಳ ಮೊದಲು. ಕುರಿಗಾಹಿಗಳಿಂದ ವಿಷಯ ತಿಳಿದ ಭಾರತೀಯ ಸೇನೆ ಕಾರ್ಯಾಚರಣೆಯನ್ನು ಆರಂಭಿಸಿದ್ದು ಅದರ ಎರಡನೆ ದಿನ! ಮುಂದೆ ನಡೆದಿದ್ದು ಜಗಜ್ಜಾಹೀರು. ಇದನ್ನು ಯುದ್ಧವೆಂದು ಕರೆಯಬೇಕೋ ಅಥವಾ ಕಾರ್ಯಾಚರಣೆಯೆಂದು ಪರಿಗಣಿಸಬೇಕೋ ಎನ್ನುವ ಗೊಂದಲ ಜಗತ್ತಿನ ಸಮರತಜ್ಞರೆಲ್ಲರಿಗೂ ಮೂಡಿತು. ಕಾರ್ಗಿಲ್‌ನ ಬೆಟ್ಟ ಮತ್ತು ಬೆಟ್ಟದ ಕೊರಕಲಿನ ಇಂಚಿಂಚನ್ನೂ ಜಗತ್ತಿನ ಮಾಧ್ಯಮಗಳೆಲ್ಲವೂ ತೋರಿಸಿದವು. ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ವಿದೇಶಾಂಗ ನೀತಿಗಳು ವ್ಯಾಖ್ಯಾನಿಸಿದವು. ಯೋಧರ ಬಲಿದಾನವಾಯಿತು. ವೀರತೆಯ ಚಕ್ರಗಳು ಪ್ರಧಾನವಾದವು. ಮೊಟ್ಟ ಮೊದಲ ಬಾರಿಗೆ ದೇಶದ ಜನಸಾಮಾನ್ಯ ಬೋರ್ಸ್, ಮಿಗ್, ಸುಕೋಯ್ ಎಂಬ ಹೆಸರುಗಳನ್ನು ಉಚ್ಚರಿಸಿದ. ಜಮ್ಮು ಮತ್ತು ಕಾಶ್ಮೀರ, ಪಾಕ್ ಆಕ್ರಮಿತ ಕಾಶ್ಮೀರ ಎಂಬ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದವು. ಕೇವಲ ಒಂದು ವರ್ಷದ ಹಿಂದೆ ನಡೆದಿದ್ದ ಅಣ್ವಸ್ತ್ರ ಪರೀಕ್ಷೆ, ಭಾರತದ ಸದೃಢ ನಾಯಕತ್ವಗಳು ಕಾರ್ಗಿಲ್ ಪ್ರಕರಣವನ್ನು ವೈಚಾರಿಕ ವ್ಯಾಖ್ಯಾನಕ್ಕೊಳಪಡಿಸಿದವು!
ಇಂದು ಇವೆಲ್ಲಾ ನಡೆದು ಎರಡು ದಶಕಗಳಾಗಿವೆ. ಈ ೨೦ ವರ್ಷಗಳುದ್ದಕ್ಕೂ ಕಾರ್ಗಿಲ್ ವಿಜಯವನ್ನು ಎಲ್ಲಾ ಆಯಾಮಗಳಿಂದ ವಿಮರ್ಶೆಗೊಳಪಡಿಸಿ, ಬಲಿದಾನಿಗಳ ಸ್ಮರಣೆಯನ್ನು ಹಸಿರಾಗಿಟ್ಟು ಕಾರ್ಗಿಲ್ ಎಂದರೆ ದೇಶಪ್ರೇಮಕ್ಕೆ, ಸೈನಿಕ ಪ್ರೇಮಕ್ಕೆ ಪರ್ಯಾಯ ಪದ ಎಂಬ ವಾತಾವರಣವನ್ನೂ ದೇಶದಲ್ಲಿ ನಿರ್ಮಿಸಲಾಗಿದೆ. ಆದರೆ ದೇಶ ಕಂಡ ಅತಿದೊಡ್ಡ ಸೈನಿಕ ಕಾರ್ಯಾಚರಣೆ ನೀಡುವ ಸಂದೇಶ ಅಷ್ಟೆಯೇ? ಕಾರ್ಗಿಲ್ ವಿಜಯದ ಅಬ್ಬರದಲ್ಲಿ ಐತಿಹಾಸಿಕ ಪ್ರಮಾದವನ್ನು ಅಷ್ಟು ಸುಲಭವಾಗಿ ಮರೆಯಲಾದೀತೇ? ಕಾರ್ಗಿಲ್ ನಂತರ ದೇಶದ ಭದ್ರತಾ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯೆಂಬುದು ನಿಜವಾದರೂ ಭಾರತ ಅದಕ್ಕೆ ತೆತ್ತ ಬೆಲೆಯೇನು? ಈ ೨೦ ವರ್ಷಗಳಲ್ಲಿ ಕಾರ್ಗಿಲ್ ಅನ್ನು ನಾವು ನೋಡಬೇಕಾಗಿದ್ದು ಹೀಗೆ!
ಪಾಕಿಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕೆಂಬ ಉಮೇದು ಅದೆಷ್ಟಿತ್ತೆಂದರೆ ಸ್ವಾತಂತ್ರ್ಯಾನಂತರ ಕೆಲವೇ ತಿಂಗಳುಗಳಲ್ಲಿ ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. ಅದನ್ನು ಪಾಕಿಸ್ಥಾನದ ಮತಾಂಧತೆ, ಸಾಮ್ರಾಜ್ಯ ವಿಸ್ತರಣೆ ಎಂದೇ ಕರೆಯೋಣ. ಆದರೆ ಪಾಕ್ ಅಕ್ರಮಣದ ಹೊತ್ತಲ್ಲಿ ಎಡೆಬಿಡಂಗಿತನ ಪ್ರದರ್ಶಿಸಿದ ದೆಹಲಿಯಲ್ಲಿ ಆಳುವವರ ಮನಸ್ಥಿತಿಯನ್ನು ಏನೆಂದು ಕರೆಯೋಣ? ಕಾಲು ಕೆರೆದು ಜಗಳಕ್ಕೆ ಬಂದವರು ಸೋಲು ಖಚಿತ ಎನಿಸಿದಾಗ ಕಾಶ್ಮೀರವನ್ನು ‘ಅಂತಾರಾಷ್ಟ್ರೀಯ ಸಮಸ್ಯೆ’ ಮಾಡಿದ್ದರು. ಅದನ್ನು ಒಪ್ಪಿಕೊಂಡವರನ್ನು ಏನೆಂದು ಕರೆಯಬೇಕು? ಹಾಗಾಗಿ ಕಾರ್ಗಿಲ್ ಪ್ರಮಾದಕ್ಕೆ ಪಾಕಿಸ್ಥಾನದ ಆಕ್ರಮಣಶೀಲ ಮಾನಸಿಕತೆ ಎಷ್ಟು ಹೊಣೆಯೋ ಅಂದಿನ ದೆಹಲಿಯವರನ್ನೂ ಅಷ್ಟೇ ಹೊಣೆಗಾರರನ್ನಾಗಿ ಮಾಡದೆ ಕಾರ್ಗಿಲ್ ವಿಜಯವನ್ನು ಬಣ್ಣಿಸುವಂತಿಲ್ಲ! ಒಂದು ವೇಳೆ ಪಾಕ್ ಆಕ್ರಮಿತ ಕಾಶ್ಮೀರ ಎಂಬುದೇ ಇಲ್ಲದಿರುತ್ತಿದ್ದರೆ, ನಲ್ವತ್ತೆಂಟರಲ್ಲೇ ಜನಮತಗಣನೆ ಎಂಬ ಪಾಕಿನ ಉದ್ಧಟತನವನ್ನು ದೆಹಲಿಯವರು ಹತ್ತಿಕ್ಕಿದ್ದರೆ ಎಲ್‌ಒಸಿಯೊಳಗೆ ಪಾಕಿಗಳು ನುಸುಳುತ್ತಿದ್ದರೇ? ಹೀಗೆ ೧೯೪೮ರಿಂದಲೂ ಮಹಾರಾಜನ ಗೋಜಲಿನ ಮನಸ್ಸನ್ನೂ, ದೆಹಲಿಯವರ ಉದಾಸೀನವನ್ನೂ ಬಂಡವಾಳ ಮಾಡಿಕೊಂಡು ಬಂದಿದ್ದರ ಅಂತಿಮ ಫಲವೇ ಕಾರ್ಗಿಲ್. ಅಂಥಾ ಐತಿಹಾಸಿಕ ತಪ್ಪೊಂದಕ್ಕೆ ಭಾರತ ಮೊಟ್ಟಮೊದಲು ಪಾಠ ಕಲಿತಿತು ಎಂಬುದನ್ನು ತೋರಿಸಿದ ಕಾರಣಕ್ಕೆ ಎರಡು ದಶಕಗಳ ತರುವಾಯ ಕೂಡಾ ಕಾರ್ಗಿಲ್ ವಿಜಯ ಮುಖ್ಯವಾಗುತ್ತದೆ. ಈ ಇಪ್ಪತ್ತು ವರ್ಷಗಳ ನಂತರ ಕಾರ್ಗಿಲ್ ಕಾರ್ಯಾಚರಣೆಯನ್ನು ಅವಲೋಕಿಸಿದರೆ ಕಾಣುವ ಸಂಗತಿಗಳು ಹೊಸ ಭಾರತವೊಂದನ್ನು ನಮಗೆ ತೋರಿಸುತ್ತವೆ. ೧೯೯೯ರ ಮೇ ನಲ್ಲಿ ಭಾರತೀಯ ನೆಲದ ಆಕ್ರಮಣ ಕುರಿಗಾಹಿಗಳ ಮೂಲಕ ಪತ್ತೆಯಾಯಿತು ಎಂಬುದು ನಮಗಿಂದು ಚಂದಮಾಮನ ಕಥೆಯಂತೆ ಕಾಣಿಸುತ್ತವೆ. ಆದರೆ ಪರಿಸ್ಥಿತಿ ಹಾಗೆಯೇ ಇತ್ತು ಎಂಬ ಕಠೋರ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಒಂದು ವೇಳೆ ಸೈನಿಕರಿಗೆ ಚಳಿಯಲ್ಲೂ ಬಂಕರಿನಲ್ಲಿರುವ ವ್ಯವಸ್ಥೆಗಳು ಇದ್ದಿದ್ದಿದ್ದರೆ, ಆಳುವವರಿಗೆ ಆ ಕಲ್ಲು ಬೆಟ್ಟಗಳೂ ದೇಶದ ಅಮೂಲ್ಯ ಅಂಗ ಎಂಬ ಗಂಭೀರತೆಯಿದ್ದಿದ್ದರೆ… ನೆಹರೂ ಕಾಲದಿಂದ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ರಕ್ಷಣಾ ಬಜೆಟಿನ ಮೊತ್ತವನ್ನು ನೋಡಿದರೂ ಇದರ ಅಂತರಾರ್ಥ ತಿಳಿದುಹೋಗುತ್ತವೆ. ಅಂದರೆ ನೆಹರೂನಿಂದ ತೊಡಗಿ ಎಲ್ಲಾ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿತ ಪ್ರಧಾನಮಂತ್ರಿಗಳೆಲ್ಲರೂ ಕಾರ್ಗಿಲ್ ಅನ್ನು ರಣರಂಗವಾಗಿ ಪರಿವರ್ತಿಸಿದಕ್ಕೆ ಪಾಲುದಾರರು. ಅವೆಲ್ಲದರ ಫಲವನ್ನು ವಾಜಪೇಯಿಯವರು ಹೊರಬೇಕಾದದ್ದು ವಿಪರ್ಯಾಸ ಮತ್ತು ಇನ್ನೊಂದರ್ಥದಲ್ಲಿ ದೇಶದ ಅದೃಷ್ಟ! ಏಕೆಂದರೆ ಯಾರೋ ಮಾಡಿದ ಪ್ರಾರಬ್ಧವನ್ನು ವಾಜಪೇಯಿ ಹೊರಬೇಕಾಯಿತು ಮತ್ತು ಸೂಕ್ಷ್ಮ ಭದ್ರತಾ ಸಂಗತಿಯೊಂದನ್ನು ನಿಭಾಯಿಸಲು ದೆಹಲಿಯಲ್ಲಿ ವಾಜಪೇಯಿಯಂಥಾ ಸಂವೇದನಾಶೀಲರು ಪ್ರಧಾನಿಗಳಿದ್ದರು!
ಅದಕ್ಕೆ ಅಂದು ವಾಜಪೇಯಿ ಕೈಗೊಂಡ ಕ್ರಮಗಳೇ ಸಾಕ್ಷಿ.
೧೯೯೯ರ ಪೂರ್ವದಲ್ಲಿ ಲಡಾಖ್ ಸೆಕ್ಟರಿನಲ್ಲಿ ಆರ್ಟಿಲರಿ ಟ್ರೂಪ್‌ಗಳ ಸಂಖ್ಯೆ ಅತ್ಯಂತ ಕಡಿಮೆಯಿತ್ತು, ಡ್ರಾಸ್-ಲಡಾಖ್- ಕಾರ್ಗಿಲ್ ಸೆಕ್ಟರ್‌ಗಳು ಹೈ ಆಲ್ಟಿಟ್ಯೂಡ್ ವಲಯಗಳಾದರೂ, ತೊಲೊಲಿಂಗ್‌ನಂಥಾ ಸೂಕ್ಷ್ಮ ಸಮರಭೂಮಿಗಳಿದ್ದರೂ ಮೌಂಟನರೀಸ್ ತುಕಡಿಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಸರ್ವ ಋತುಗಳಲ್ಲಿ ಹೋರಾಡುವ ಯಾವ ಸೌಲಭ್ಯಗಳೂ ಇಲ್ಲದಿದ್ದಾಗ ದೇಶದ ಭದ್ರತೆ ಅಪಾಯದಲ್ಲಿರುತ್ತದೆ ಎಂಬುದನ್ನು ಕಾರ್ಗಿಲ್ ಸಾರಿ ಹೇಳಿತು. ಇದನ್ನು ದೆಹಲಿಯಲ್ಲಿ ವಾಜಪೇಯಿಯಂಥವರು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಿತ್ತು. ೯೯ಕ್ಕೆ ಮುನ್ನ ಕೂಡಾ ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ನೀಯೋಜನೆಯಾಗುತ್ತಿದ್ದರೂ ಟ್ರೂಪ್‌ಗಳ ಸಂಖ್ಯೆ ಅತ್ಯಂತ ಕಡಿಮೆಯಿತ್ತು. ಅದರಲ್ಲೂ ಎಂಜಿನಿಯರಿಂಗ್ ಟ್ರೂಪ್‌ಗಳು ಬೆರಳೆಣಿಕೆಯಷ್ಟಿದ್ದವು. ಕಾರ್ಗಿಲ್ ವಿಜಯದ ನಂತರ ಸೈನ್ಯ ಮತ್ತು ಸರ್ಕಾರ ನೇಮಕ ಮಾಡಿದ ತನಿಖಾ ಆಯೋಗಗಳು ಈ ಕೊರತೆಗಳನ್ನು ಎತ್ತಿತೋರಿಸಿದ್ದವು. ವಿಶ್ವವನ್ನೇ ಎದುರುಹಾಕಿಕೊಂಡು ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ಪ್ರಧಾನಿ ವಾಜಪೇಯಿಯವರಿಗೆ ಸೈನ್ಯದ ಉನ್ನತೀಕರಣ ಸವಾಲಾಗಿ ಕಾಣಲಿಲ್ಲ. ಅಂದು ವಾಜಪೇಯಿಯವರು ಮೊಟ್ಟಮೊದಲು ಮಾಡಿದ ಕೆಲಸವೆಂದರೆ ರಾಷ್ಟ್ರೀಯ ರೈಫಲ್ಸ್‌ನ ಶಕ್ತಿಯನ್ನು ಹೆಚ್ಚಿಸಿದ್ದು. ಇಂದು ಜಮ್ಮು ಮತ್ತು ಕಾಶ್ಮೀರ ಉಳಿದಿರುವುದಕ್ಕೆ ಕಾರಣ ಅಂದು ವಾಜಪೇಯಿ ನೇಮಿಸಿದ್ದ ಈ ಆರ್-ಆರ್ ಟ್ರೂಪ್‌ಗಳ ಸಂಖ್ಯೆ. ಅಲ್ಲದೆ ಅದುವರೆಗಿದ್ದ ಡಿವಿಶನ್‌ಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದರು. ಗಡಿ ಭಾಗದಲ್ಲಿ ಬೋಯಿಂಗ್ ಸಿ-೧೭ ಗ್ಲೋಬ್‌ಮಾಸ್ಟರ್ ಗಳು ಇಳಿಯುವಂಥಾ ನಿಲ್ದಾಣಗಳನ್ನು ನಿರ್ಮಿಸಿದರು. ಇವೆಲ್ಲವೂ ಅತೀ ಶೀಘ್ರದಲ್ಲಿ ಜಾರಿಗೆ ಬಂದವು. ಏಕೆಂದರೆ ಅಂದು ಕಾರ್ಗಿಲ್ ರಿವ್ಯೂ ಕಮಿಟಿ ನೀಡಿದ ವರದಿಯನ್ನು ನೋಡಿದ್ದ ವಾಜಪೇಯಿಯವರು ಗಾಭರಿಗೊಂಡಿದ್ದರು. ಅಂದರೆ ಡ್ರಾಸ್-ಲಢಾಖ್ ಮತ್ತು ಕಾರ್ಗಿಲ್ ಭಾಗದಲ್ಲಿ ತಕ್ಕ ಸಿದ್ಧತೆ ಇಲ್ಲದಿರುವುದಕ್ಕೆ ನೆಹರೂ ಒಬ್ಬರೇ ಕಾರಣರಾಗಿರಲಿಲ್ಲ! ಏಕೆಂದರೆ ೧೮ನೇ ಶತಮಾನದ ಮಿಲಿಟರಿ ಸುಧಾರಣೆಗಳನ್ವಯ ಈ ಭಾಗದಲ್ಲಿ ಏನೇನು ಕ್ರಮಗಳಿರಬೇಕಿತ್ತೋ ಅವು ಮಾತ್ರ ೧೯೯೯ರವರೆಗೂ ಅಲ್ಲಿದ್ದವು! ಅಂದರೆ ವಾರನ್ ಹೇಸ್ಟಿಂಗ್ ಸುಧಾರಣೆಗಳನ್ವಯ ಸ್ವತಂತ್ರ ಭಾರತ ತನ್ನ ಸೈನ್ಯವನ್ನು ಇಟ್ಟುಕೊಂಡಿತ್ತು! ಕಾಂಗ್ರೆಸ್ ಸರ್ಕಾರಗಳು ಹೇಸ್ಟಿಂಗ್ ನಿಯಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವು.
ಕಾರ್ಗಿಲ್‌ನಲ್ಲಿ ಬಲಿದಾನಿಗಳಾದ ಐನೂರಕ್ಕೂ ಹೆಚ್ಚಿನ ಯೋಧರ ಪಾರ್ಥಿವ ಶರೀರ ಅವರವರ ಊರಿಗೆ ಬಂದಾಗ ಅದು ದೇಶಭಕ್ತಿಯ ಮತ್ತೊಂದು ಮಜಲನ್ನು ದೇಶಕ್ಕೆ ಪರಿಚಯಿಸಿತು. ಮೊದಲಿನ ಕಾಂಗ್ರೆಸ್ ಸರ್ಕಾರಗಳು ಕರ್ಚಿನ ನೆಪವೊಡ್ಡಿ ಪಾರ್ಥಿವ ಶರೀರಗಳನ್ನು ಸಾಮೂಹಿಕ ದಹನ ಮಾಡುತ್ತಿತ್ತು. ಅಲ್ಲಿಯವರೆಗೆ ಸೈನಿಕರಿಗಿದ್ದ ವೇತನ ಮತ್ತು ಪಿಂಚಣಿ ಮೊಟ್ಟಮೊದಲ ಬಾರಿಗೆ ವೈಜ್ಞಾನಿಕವಾಗಿ ಪರಿಷ್ಕರಣೆಯಾಯಿತು. ಇವೆಲ್ಲವೂ ಆಗಿದ್ದು ಕಾರ್ಗಿಲ್ ನಂತರ. ಆಧುನಿಕ ಸಮರ ನೀತಿಯನ್ನು ಜಗತ್ತು ಇನ್ನೂ ಅಳವಡಿಸಿಕೊಳ್ಳುತ್ತಿದ್ದಾಗ ಭಾರತ ಪ್ರಾಯಾಸಪಟ್ಟಾದರೂ ಆ ಸಮರತಂತ್ರದಲ್ಲಿ ಯಶಸ್ವಿಯಾಗಿದೆ ಎನ್ನುವುದನ್ನು ವಾಜಪೇಯಿ ಗಮನಿಸಿದ್ದರು. ಕಾರ್ಗಿಲ್ ವಿಜಯದ ಕೆಲವೇ ತಿಂಗಳುಗಳಲ್ಲಿ ಭಾರತೀಯ ಸೈನ್ಯದ ಚೆಹರೆಯೇ ಬದಲಾಯಿತು. ಸೈನ್ಯ ಬದಲಾದ ಕಾರಣ ಭಾರತದ ಮಾತಾಡುವ ದಾಟಿಯೇ ಬದಲಾಯಿತು. ಕಾರ್ಗಿಲ್ ಸಂಭವಿಸುವ ವರ್ಷದ ಮುಂಚೆ ಪಾಕಿಸ್ಥಾನವನ್ನು ನಂಬುತ್ತಿದ್ದ ಭಾರತ, ನಂಬಿ ಬಸ್ ಪ್ರಯಾಣ ಮಾಡಿದ್ದ ಭಾರತ, ಕಾರ್ಗಿಲ್ ನಂತರ ಪಾಕ್ ಅನ್ನು ಇನ್ನೆಂದೂ ನಂಬಕೂಡದು ಎಂದು ಘೋಷಿಸಿತು. ಆ ಘೋಷಣೆ ಭಾರತವನ್ನು ಇಂದಿಗೂ ಉಳಿಸುತ್ತಿದೆ. ಮೊಟ್ಟಮೊದಲ ಬಾರಿಗೆ ಭಾರತ, ಪಾಕಿಸ್ಥಾನದ ‘ಸೈನಿಕರಲ್ಲ, ಉಗ್ರರು’ ಎಂಬ ಎಂದಿನ ಸಬೂಬಿಗೆ ಉತ್ತರ ಕೊಟ್ಟಿತ್ತು. ಅದರ ಪರಿಣಾಮ ಮುಂದೆ ಬಂದ ಸರ್ಕಾರಗಳು ಪಾಕ್ ಜೊತೆ ವ್ಯವಹರಿಸಲು ಸಂಪೂರ್ಣವಾಗಿ ಬಾಹುಗಳನ್ನು ತೆರೆಯಲೇ ಇಲ್ಲ. ಸಂಬಂಧವರ್ಧನೆಗೆ ಕ್ರಿಕೆಟ್ ಪರಿಹಾರ ಎನ್ನುವ ಪುರಾತನ ವಾದವನ್ನು ಕಾರ್ಗಿಲ್ ಕಿತ್ತುಹಾಕಿತ್ತು. ಶೃಂಗಸಭೆಗಳು ಕಾಲಯಾಪನೆಯ ಹರಟೆಗಳು ಎಂದು ತಿರಸ್ಕರಿಸಿತು. ಅಂತಾರಾಷ್ಟ್ರೀಯ ವೇದಿಕೆಗಳಿಗೆ ದೌಢಾಯಿಸುವ ಪಾಕಿಸ್ಥಾನದ ಬುದ್ಧಿಗೆ ಸಮರ್ಥ ನಾಯಕತ್ವವೊಂದೇ ಪರಿಹಾರ ಎಂದು ಭಾರತ ನಂಬಿತು. ಭಾರತ ಉಳಿಯಬೇಕೆಂದರೆ ಸಮಸ್ತ ಜಾಗತಿಕರಂಗ ತನಗೆ ಮಣೆ ಹಾಕಬೇಕೆಂಬ ಆಸೆಯನ್ನು ಚಿಗುರಿಸಿದ್ದೂ ಕೂಡಾ ಇದೇ ಕಾರ್ಗಿಲ್!
ಅವೆಲ್ಲದರ ಫಲವನ್ನು ಇಂದು ಕಾಣುತ್ತಿದ್ದೇವೆ. ಈ ಎಲ್ಲಾ ಕಾರಣಗಳಿಗೆ ಕಾರ್ಗಿಲ್ ಎಂದರೆ ಇಂದು ನಮಗೆ ೭೧ರ ಮಹಾ ವಿಜಯಕ್ಕಿಂತ ಒಂದು ಕಾಳು ಹೆಚ್ಚೆಂಬಂತೆ ಕಾಣುತ್ತದೆ. ಉಳಿದೆಲ್ಲಕ್ಕಿಂತ ಕಾರ್ಗಿಲ್ ಪರಾಕ್ರಮವೇ ಮಹಾಪರಾಕ್ರಮ ಎಂಬಂತೆ ಕಾಣುತ್ತದೆ. ಕಾರ್ಗಿಲ್-ಟೈಗರ್ ಹಿಲ್-ತೊಲೋಲಿಂಗ್‌ಗಳು ದೇಶಭಕ್ತರ ತೀರ್ಥಕ್ಷೇತ್ರವೆಂಬಂತೆ ಕಾಣುತ್ತದೆ. ಭಾರತದ ಮುಂದಿನ ಹಲವು ಪರಾಕ್ರಮಗಳಿಗೆ ಕಾರ್ಗಿಲ್ ಪರಾಕ್ರಮ ಪ್ರೇರಣೆಯ ಪಠ್ಯವೆಂಬಂತೆ ಭಾಸವಾಗುತ್ತದೆ. ದೇಶದಲ್ಲಿ ಏರ್ ಸ್ಟ್ರೈಕೇ ನಡೆಯಲಿ, ಸರ್ಜಿಕಲ್ ಸ್ಟ್ರೈಕೇ ನಡೆಯಲಿ ಯಾಕೋ ಕಾರ್ಗಿಲ್ ನೆನಪಾಗಿಬಿಡುತ್ತದೆ. ಅಷ್ಟೇ ಏಕೆ ಪರಮರಚಕ್ರ, ಸಮರವಸ್ತ್ರ ಎಂದಾಗಲೆಲ್ಲಾ ಹೊಸ ಪೀಳಿಗೆಗೆ ಬಾಹುಸ್ಪುರಣವನ್ನೂ, ಆನಂದಬಾಷ್ಪವನ್ನುಂಟುಮಾಡುವುದು ಕಾರ್ಗಿಲ್ ಎಂಬ ಕಗ್ಗಲ್ಲ ಬೆಟ್ಟವೇ. ಇಪ್ಪತ್ತಾದರೂ ಎಪ್ಪತ್ತಾದರೂ ಅದು ಹಾಗೆಯೇ!

Leave a comment